Thursday, 27 August 2020

ಸುಜ್ಞಾತನ ಸತ್ರದಲಿ


ಆಭಾರದ ಹೃದಯಕೆ ಸೋಲೆಲ್ಲಿದೆ

ಆಭಾಸದ ಹೃದಯಕೆ ಗೆಲುವೆಲ್ಲಿದೆ

ಸಂಕೋಲೆಯ ಬದುಕಿಗೆ ಸುಖವೆಲ್ಲಿದೆ

ಸಂಕೋಚದ ಬತ್ತಳಿಕೆಗೆ ಗುರಿಯೆಲ್ಲಿದೆ


ಸಾಂಗತ್ಯ ಬಯಸದೆ ಸ್ನೇಹವೆಲ್ಲಿದೆ

ಸಾಂಗತೆ ಬಗಲೇರದೆ ಪ್ರೀತಿಯೆಲ್ಲಿದೆ

ಸಾಧನೆಯ ಕನಸಿಲ್ಲದೆ ಫಲವೆಲ್ಲಿದೆ

ಸಾಧಕರ ಕಟಾಕ್ಷವಿರದೆ ಯೋಗವೆಲ್ಲಿದೆ


ಆನಂದವ ಬಲ್ಲವನಿಗೆ ನೋವೆಲ್ಲಿದೆ

ಆನನಕೆ ನಗುವಿರದೆ ಭೂಷಣವೆಲ್ಲಿದೆ

ಸಂಕುಚಿತ ಗುಣಕೆ ಗೌರವವೆಲ್ಲಿದೆ

ಸಂಕುಲದ ಸಿರಿತನಕೆ ಅವಮಾನವೆಲ್ಲಿದೆ


ಸಚ್ಚರಿತ ಸಂಕಲ್ಪಕೆ ಕಳವಳವೇತಕೆ

ಸಚ್ಛತೆಯ ಸಂಘಟನೆಗೆ ಕಳಂಕವೆಲ್ಲಿದೆ

ಸಂಪದದ ಉತ್ಕರ್ಷವೆ ಕೂಳಾಗದು

ಸಂಪನ್ನದ ಉಗಮವೆ ಕನಕವಾಗುವುದು


ಅಜ್ಞಾನಿಯ ಎದೆಯೊಳಗೆ ಬೆಳಕೆಲ್ಲಿದೆ

ಅಜ್ಞಾತನ ಎಲ್ಲೆಯೊಳಗೆ ಬೆಡಗೆಲ್ಲಿದೆ

ಸುಜ್ಞಾನಿಯ ಸಖ್ಯದಲಿ ನಾಕವಿದೆ

ಸುಜ್ಞಾತನ ಸತ್ರದಲಿ ನಾಡಿನೊಳಿತಿದೆ..


ರಾಮಚಂದ್ರ ಸಾಗರ್


Sunday, 23 August 2020

ನೀನಿರದ ಕ್ಷಣದಲ್ಲಿ…

ನಿನ್ನ ಪ್ರೀತಿಯ ಸುಳಿಯಿಂದ

ನಾ ಹೇಗೆ ಹೊರ ಬರಲಿ ಗೆಳತಿ

ನಿನ್ನ ಮೋಹದ ಬಂಧನದಿಂದ

ನಾ ಹೇಗೆ ಹೊರಗುಳಿಯಲಿ 


ನಿನ್ನ ಪ್ರೇಮದ ಘಮಲಿನ ಅಲೆಯಿಂದ

ನಾ ಎಲ್ಲಿ ಬಚ್ಚಿಟ್ಟುಕೊಳ್ಳಲಿ

ನಿನ್ನ ಕಣ್ಣೋಟದ ಕಾಂತಿಯಿಂದ

ನಾ ಬೆರಗುಗೊಳ್ಳದೆ ಹೇಗಿರಲಿ


ನೀ ಬಾರದೆ ನನ್ನೆಡೆಗೆ ಒಲವೆ

ಪರಿತಪಿಸುವ ಮನದ ಪಾಡೇನು

ನೀ ಅಪ್ಪದೆ ನನ್ನೆದೆಗೆ ಉಸಿರೆ

ಎದೆಯ ದನಿಗೆ ಉಳಿವೇನು


ನೀ ಹೂಮನದಿ ಆಹ್ವಾನಿಸದೆ 

ಮನಕೆ ಕತ್ತಿಯಾಗಿ ಚುಚ್ಚುವೆಯೇನು

ನೀ ಬಯಕೆಯಲಿ ಬಳಿಯಾಗದೆ

ಕ್ಷಣ ಕ್ಷಣವು ನೋವಿನ ಮಳೆಯಾಗದಿರು..


ಬಾಳೆಲ್ಲ ನೀನಾಗಿರಲು ಉಳಿವೆಲ್ಲಿ

ಸಾಗಲಾರೆನು ವಿರಹದ ಹೊಳೆಯಲ್ಲಿ

ನೀನಿರದ ಹಾದಿಗೆ ಗೆಲುವೆಲ್ಲಿ

ಜೊತೆಯಾಗದೆ ಬಾಳಿಗೆ ನೆಲೆಯೆಲ್ಲಿ


ನಿನ್ನ ಪ್ರೇಮದ ಬಲೆಯೊಳಗೆ

ನಾ ಬಂಧಿಯಾಗಿರಲು

ನೀ ಒಲಿಯದೆ ಜಗದೊಳಗೆ

ನನ್ನುಸಿರು ದನಿಸುವುದೇನು...?


ರಚನೆ: ರಾಮಚಂದ್ರ ಸಾಗರ್


Friday, 21 August 2020

ಸರ್ವರಿಗು ಗೌರಿ, ಗಣೇಶ ಹಬ್ಬದ ಶುಭಾಶಯಗಳು.

ಈ ವರ್ಷವಿಡೀ ಜಗಕೆ ಒಂದಲ್ಲಾ ಒಂದು ವಿಘ್ನಗಳು ನಿತ್ಯ ಕಾಡುತ್ತಿವೆ. ಇಡೀ ಜಗವೆ ಈಗ ಕೊರೊನಾ ಹೆಸರಿನ ಗಂಡಾಂತರ ಎದುರು ಅತೀ ಸಣ್ಣದಾಗಿ ಕಾಣುತ್ತಿದೆ. ಹಲವು ಜನರ ನೈಜ ಮುಖವಾಡ ಕಳಚಿಬಿದ್ದಿದೆ. ಬರಿ ನೋವೇ ಬಂದು ಎಲ್ಲರಿಗೂ ಅಪ್ಪಿದಂತ ಭಾಸವು ಈ 2020ರಲ್ಲಿ ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ನಂಬಿಕೆ..

ಈ ಸಂದರ್ಭದಲ್ಲಿ ಈಗ ನಮ್ಮ ದೈವ ಪಾವಿತ್ರದ ಸಂಕೇತವಾದ ಗೌರಿ, ಗಣೇಶ ಹಬ್ಬ ಬಂದಿದೆ. ಈ ಸಮಯದಲ್ಲಿ ನಾವು ಕೂಡ ಸರಳತೆಯನ್ನು ಮೆರೆದು ಪರಿಸರ ಸ್ನೇಹಿ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸೋಣ. ಜೊತೆಗೆ ದೇವರಲ್ಲಿ ಜಗಕ್ಕೆರಗಿದ ಎಲ್ಲಾ ವಿಘ್ನಗಳು ನಿವಾರಣೆಯಾಗಲಿಯೆಂದು ಬೇಡೋಣ..

ನಮ್ಮ ಹಿಂದೂ ಧರ್ಮದ ಸಚ್ಚರಿತ ಸಂಪ್ರದಾಯದಂತೆ ದೇವಾರಾಧನೆಯನ್ನು ಸರ್ವವೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಆ ಮೂಲಕ "ಪ್ರಾಕೃತಿಕ ದೇವರ" ಕೃಪೆಗೂ ಪಾತ್ರರಾಗೋಣ.. ಇದೇ ಆಶಯದಲ್ಲಿ ಒಂದು ಕವಿತೆ ಬರೆದಿರುವೆ..ಎಲ್ಲರಿಗೂ ಒಳಿತಾಗಲಿ ಎನ್ನುವ ಆಶಯದೊಂದಿಗೆ. ಮತ್ತೆ ಜಗವು ನಲಿದೇಳುತ್ತದೆ ಎನ್ನುವ ಆಸೆಯಿಂದ..


ಪರಿಸರ ಸ್ನೇಹಿ ಗೌರಿ ಗಣಪ


ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ

ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ

ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ

ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ


ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು

ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ

ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ

ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ


ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ

ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ

ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ

ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ


ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು 

ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು

ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ

ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ


ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?

ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ

ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ

ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ


ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ

ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ

ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ

ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..

 

ರಾಮಚಂದ್ರ ಸಾಗರ್


Sunday, 16 August 2020

ಹುಣ್ಣಿಮೆ ಬೆಳಕಂತೆ...



ನಿನ್ನ ಜೊತೆಯೆ ಸಂತೋಷದ ಕಡಲಂತೆ
ನಿನ್ನ ನೋಟವೆ ಸಂಭ್ರಮದ ಮಳೆಯಂತೆ
ನಮ್ಮ ಬದುಕೆ ವಿನೋದದ ನದಿಯಂತೆ
ನಮ್ಮ ನಡೆಯೆ ಹೂವಿನ ಹಾದಿಯಂತೆ

ನಿನ್ನ ನಗುವೆ ಉಲ್ಲಾಸದ ಕಿರಣದಂತೆ
ನಿನ್ನ ನಯನವೆ ಪ್ರೀತಿಯ ಸ್ವಾಗತದಂತೆ
ನಮ್ಮ ಒಲವೆ ಹರುಷದ ನೌಕೆಯಂತೆ
ನಮ್ಮ ಛಲವೆ ಬಾಳಿನ ಹೊಳಪಂತೆ

ನಿನ್ನ ಕೈಸೆರೆಯು ಸೌಜನ್ಯದ ವರದಂತೆ
ನಿನ್ನ ಸ್ನೇಹವು ಸೌಹಾರ್ದದ ಬಾನಂತೆ
ನಮ್ಮ ಪ್ರೇಮವು ಹುಣ್ಣಿಮೆಯ ಬೆಳಕಂತೆ
ನಮ್ಮ ಪ್ರೇರಣೆಯೆ ತ್ಯಾಗದ ನೆರಳಂತೆ

ನಿನ್ನ ಮಾತು ಬೆಲ್ಲದ ಸವಿಯಂತೆ
ನಿನ್ನ ಮನವೆ ಮಮತೆಯ ಮಂದಿರದಂತೆ
ನಮ್ಮ ಜಗವು ಸುಖದ ಅಂಗಳದಂತೆ
ನಮ್ಮ ಕಲ್ಯಾಣವು ಶ್ರೇಯದ ಕಲಶದಂತೆ

ನಿನ್ನ ಸ್ಪರ್ಶವೆ ಸರೋವರದ ಅಲೆಯಂತೆ
ನಿನ್ನ ಬಂಧವೆ ಸಮ್ಮೋಹದ ಸುಳಿಯಂತೆ
ನಮ್ಮ ಯುಗವೆ ಸಿಂಗಾರದ ಸುಗ್ಗಿಯಂತೆ
ನಮ್ಮ ಹೃದಯವೆ ಆನಂದದ ಆಧಾರದಂತೆ

ರಾಮಚಂದ್ರ ಸಾಗರ್