Monday, 11 February 2019

ಬೆಳಕಿನ ನೊಗ ಹೊತ್ತು ಬಾ

ನಗುತುಂಬಿದ ಮೊಗದಲಿ ಸಾವಿಗು ಸೋಲಿದೆ
ನಾಮಾರ್ದಾ ಬದುಕಲಿ ಕ್ಷಣ ಕ್ಷಣಕೂ ಸಾವಿದೆ 
ನಿಗರ್ವದ ನುಡಿಯಲಿ ಗೆಲ್ಲುವ ಛಲವಿದೆ
ನೀರಸದ ನಡೆಯಲಿ ಸೋಲುವ ಭಯವಿದೆ

ನುಸುಳುವ ಬುದ್ಧಿಯಲಿ ಸಿದ್ಧಿಯದು ಮರೀಚಿಕೆಯು
ನೂಳು ಪಥದಲಿ ವಿಫಲತೆಯ ದರ್ಶನ ಖಚಿತವು
ನೃತ್ಯವಾಡುವ ಪೊಳ್ಳು ಸತ್ವಗಳಿಗೆ ಮರುಳಾಗದಿರು
ನೆಲೆಯಿರುವ ಸತ್ಯನುಡಿಗೆ ನಿತ್ಯವು ಶರಣಾಗು

ನೇಹದ ನೌಕೆಗೆ ಸದಾ ಸಾರಥಿಯಾಗು
ನೈಚ್ಯದ ಕೃತಿಗೆ ಎಂದಿಗೂ ಸೋಲದಿರು
ನೊಸಲು ಗಾಳಿಗೆ ತೂರಿ ಹೋಗದಿರು
ನೋಯಿಸುವ ಮಾತಿಗೆ ಕಿವುಡನಾಗಿರು

ನೌಕೋದ್ದಾರನಂತೆ ಸತ್ಯ ಸತ್ವಗಳು ಹೊತ್ತು ಬಾ
ನಮ್ರತೆಯ ಗುಣಗಳಲಿ ಮನಗಳ ಬೆಸೆಯು ಬಾ
ನೊನೆಯಲಾರದ ಕಹಿಯಲಿ ಮಧುವಾಗು ಬಾ
ನೊಂದ ಹೃದಯಲಿ ಸುಖದ ಅಲೆಯಾಗು ಬಾ

ನಂದಿಸುವ ಕೃತಿಗೆ ಸತ್ಯದರ್ಶನ ಮಾಡಿಸು ಬಾ
ನಂಜಿನ ಮನಕೆ ಸೌಜನ್ಯ ಲೇಪಿಸುವ ಬಾ
ನಲಿವು ನೆಲೆಯಾದ ಜಗವ ಕಟ್ಟು ಬಾ
ನಲುಮೆಯ ಬೆಳಕಿನ ನೊಗ ನೀ ಹೊತ್ತು ಬಾ

ರಾಮಚಂದ್ರ ಸಾಗರ

Tuesday, 5 February 2019

ನೀ ನಗುತಿರು

ಗ..ಕಾಗುಣಿತದಲಿ ನೀತಿಸಾರದ ಪೋಣಿಕೆಯಲಿ ತಲ್ಲೀನನಾದಾಗ
ಉದಯಿಸಿದ ಕವಿತೆ

ನೀ ನಗುತಿರು

ಗಣನೆಯಿರದ ಹಾದಿಯಲಿ ನೀ ಸಾಗದಿರು
ಗಾಂಪಾರರ ಜೊತೆಯಲಿ ನೀ ಅಜ್ಞಾನಿಯಾಗದಿರು
ಗಿಂಬಳಕೆ ಕೈಯೊಡ್ಡಿ ನೀ ಬಾಳದಿರು
ಗೀಳಿಲ್ಲದೆ ಕಾಲವನು ನೀ ವ್ಯಯಿಸದಿರು

ಗುರು ತೋರಿದ ಸನ್ಮಾರ್ಗವನು ನೀ ದೂರದಿರು
ಗೂಬೆಕೂರಿಸಿ ಮುಗ್ದರನು ನೀ ಕಪಟವಾಡದಿರು
ಗೃಹೀತ ಸತ್ವಗಳಾರಾಧನೆ ನೀ ತಿಳಿದಿರು
ಗೆಲ್ಲುವ ಛಲವದು ನೀ ಮರೆಯದಿರು

ಗೇಲಿಮಾಡುವ ಜಗಕೆ ನೀ ಅಂಜದಿರು
ಗೈರತ್ತು ಶಾಂತಮನಕೆ ನೀ ಹೆಸರಾಗಿರು
ಗೊಣಗುತ ಸತ್ಯವನು ನೀ ದೂರದಿರು
ಗೋರಿಯಾದರು ಸತ್ಯದುಸಿರಿಗೆ ನೀ ಹೆಸರಾಗಿರುವೆ ಅರಿತಿರು

ಗೌರವದ ಸಮಾಜಕೆ ನೀ ಕಳಸವಾಗು 
ಗಂಪಿಸುವ ಸಹೋದರತೆಗೆ ನೀ ತೇರಾಗು
ಗಹಕೂಪ ಶಾಂತಿಯನು ನೀ ನಿಬಂಧಿಸು ಬಾ
ಗಣ್ಯತೆಯ ಗದ್ದುಗೆಯಲಿ ಸಹಿಷ್ಣುತೆಯನು ನೀ ಸ್ಥಾಪಿಸು ಬಾ

ಘನಸಾರ ಸಂದೇಶಗಳನು ನೀ ಪಠಿಸುತಿರು
ಘಾತಕರೆದೆಗು ಸ್ನೇಹವನು ನೀ ಸೂಸುತಿರು
ಘಾತಿಸುವ ಮನವನು ನೀ ಹೂವಾಗಿಸು
ಘನ ಸಜ್ಜನರ ಮಹಲಲಿ ನೀ ನಗುತಿರು

ರಾಮಚಂದ್ರ ಸಾಗರ

ನೀನಲ್ಲವೇ ಗೆಳತಿ..

ಗ..ಕಾಗುಣಿತದಲಿ ಒಲವಿನ ಅಲೆಯೊಂದು ಬೀಸಿದಾಗ
ಒಲವು ಪದಗಳಲಿ ಗೈರತ್ತು ತೋರಿದಾಗ 
ಮನದ ಮನೆಯಲಿ ಅರಳಿದ ಭಾವ ಪದಗಳಲಿ ಮೂಡಿದಾಗ

ನೀನಲ್ಲವೇ ಗೆಳತಿ..

ಗಂಧರ್ವಲೋಕದ ಮೋಹದ ಕಡಲಿನ ಅಲೆಯು
ಗಾಂಧಾರ ಸ್ವರದ ಸಮ್ಮೋಹದ  ಮೇಳವು
ಗಿರಿಧಾಮದಲಿ ಸುಳಿದಾಡುವ ಸಿಹಿಗಾಳಿಯು
ಗೀತಿಕೆಯ ಉಸಿರಿನ ವೇದಾಂತದ ಪದಮಾಲೆಯು 
ನೀನಲ್ಲವೇ ಗೆಳತಿ

ಗುಸುನಗೆಯ ಮೊಗದ ಅಮಲಿನ ಆಲೋಕವು      
ಗೂಡಾರವಾದ ಸೋಜಿಗದ ಸೌಂದರ್ಯದ ಕಣಜವು
ಗೃಹೀತ ಗುಣಗಳ ಒಲುಮೆಯ ಸತ್ಕಾರದ ಮಳೆಯು
ಗೆಳೆತನ ಬಾಳಿಗೆ ಸಿದ್ಧಿಸುವ ಅಮರತೆಯ ವರವು 
ನೀನಲ್ಲವೇ ಗೆಳತಿ

ಗೇಲಿಸುವ ಜಗಕೆ ಬೆದರಿಸಿದ ಚತುರೆಯು
ಗೈರತ್ತು ಪ್ರೀತಿಯಲ್ಲಿ ತೋರಿದ ಶಕ್ತೆಯು
ಗೊಂದಲದ ಹಾದಿಯಲಿ ದಾರಿತೋರಿದ ಪಾರಂಗತೆಯು           
ಗೋಚರಿಸುವ ಬೆಳಕಿನಲಿ ಮೂಡಿದ ಜಗವು 
ನೀನಲ್ಲವೆ ಗೆಳತಿ

ಗೌರವದ ಬದುಕಿನ ಸದಾಶಯದ ನದಿಯು
ಗಂಪಿಸುವ ಒಲುಮೆಯ ಸೌರಭದ ಸೌಧವು
ಗಹನತೆಯ ಕನಸಿಗೆ ಸಾಕಾರದ ಶರಧಿಯು 
ಗಂಧದ ಬನದ ಚೆಲುವ ತನಯೆಯು 
ನೀನಲ್ಲವೇ ಗೆಳತಿ

ಗಾರುಡಿಗ ಲೋಕದ ವಿನೋದದ ಮಾಲೆಯು
ಗಿರಿಬನದ ಮೆಲುಗಾಳಿಯಲಿ ನರ್ತಿಸುವ ಹೂಲತೆಯು
ಗೀಚಿದ ಮುಸ್ಸಂಜೆಯ ರಂಗಿನ ಒಲವ ಓರಣವು
ಗುನುಗುನಿಸು ನನ್ನೆದೆಯ ಒಲವಗಾನವು 
ನೀನಲ್ಲವೇ ಗೆಳತಿ

ರಾಮಚಂದ್ರ ಸಾಗರ

Sunday, 3 February 2019

ನೀನೆ ಗೆಳತಿ..

ಕ..ಕಾಗುಣಿತದಲಿ ಒಲವಿನ ಸೆಲೆ ಅಲೆಯಾಗಿ ಕಂಗೊಳಿಸಿದಾಗ, ಒಲವು ನದಿಯಾಗಿ ಹರಿದಾಗ..

ನೀನೆ ಗೆಳತಿ..

ಕಪ್ಪಿರುಳು ಹಾದಿಯಲಿ ಬೆಳಕಾಗಿ ಬಂದವಳು
ಕಾನನದ ಕಂದರದಲಿ ಕೈಹಿಡಿದು ನಡೆಸಿದವಳು
ಕಿರುಕುಳದ ಮನದಲಿ ಸವಿಜೇನು ತುಂಬಿದವಳು
ಕೀಳುದೆಸೆಯ ಬದುಕಲಿ ಚೈತನ್ಯಧಾರೆಯಾದವಳು

ಕುಸುಮಿತ ಒಲವ ಬನದಲಿ ಸ್ವಾಗತಿಸಿ ನಕ್ಕವಳು
ಕೂಗಿಡುವ ಹೃದಯದಲಿ ರಮಿಸುವ ಸುರಕನ್ನೆಯಾದವಳು
ಕೃಪೆತೋರುವ ನಯನದಲಿ ಒಲವಿಗೆ ಆಸರೆಯಾದವಳು
ಕೆರಳಿಸು ಕನಸಲಿ ಸಿಹಿಧಾರೆಯಾದವಳು

ಕೇದಿಗೆಯ ಹೂ ಘಮಲಿನಲಿ ಮನ ಸೌರಭಿಸುವವಳು
ಕೈವಲ್ಯದ ಬದುಕಲಿ ಮೋಹದ ಮಳೆಯಾದವಳು
ಕೊನರುವ ಪ್ರೀತಿಗೆ ಆಸರೆಯ ಆಗಸವಾದವಳು
ಕೋಮಲ ಗಾನದಲಿ ಪ್ರೇಮದ ಕಡಲಾದವಳು

ಕೌಟಿಲ್ಯದ ಜಗದಲಿ ನಿರ್ಭೀತಿಯ ನಿನದ ಮೊಳಗಿಸಿದವಳು
ಕಮ್ಮಟದ ನಡುಮನೆಯಲಿ ಅಭಯದ ಉತ್ಪನ್ನವಾದವಳು
ಕಹಳೆಯ ಸದ್ದಿನಲಿ ಆಹ್ಲಾದದ ಬಾಳ್ವೆಗೆ ಕರೆಯೋಲೆಯಾದವಳು
ಕಮನೀಯ ಹೃದಯಲಿ ಮನ ಬೆಸೆದ ಚೆಲುವೆಯು ನೀನು

ಕಾಠಿಣ್ಯದ ಬದುಕನು ಹೂವಾಗಿಸಿದ ಪಾರಂಗತೆಯು
ಕಿನಾರೆಯ ಹೂಬನದಲಿ ಸೊಗಸು ಚೆಲ್ಲಿದವಳು
ಕೀರ್ತಿಸುವ ಒಲವಿಗೆ ಸುಜಲವಾಗಿ ಹರಿದವಳು
ಕುಶಲದ ಬಾಳ ನದಿಯನು 
ಮೈದುಂಬಿದವಳು ನೀನೆ ಗೆಳತಿ

ರಾಮಚಂದ್ರ ಸಾಗರ್