Tuesday, 5 February 2019

ನೀ ನಗುತಿರು

ಗ..ಕಾಗುಣಿತದಲಿ ನೀತಿಸಾರದ ಪೋಣಿಕೆಯಲಿ ತಲ್ಲೀನನಾದಾಗ
ಉದಯಿಸಿದ ಕವಿತೆ

ನೀ ನಗುತಿರು

ಗಣನೆಯಿರದ ಹಾದಿಯಲಿ ನೀ ಸಾಗದಿರು
ಗಾಂಪಾರರ ಜೊತೆಯಲಿ ನೀ ಅಜ್ಞಾನಿಯಾಗದಿರು
ಗಿಂಬಳಕೆ ಕೈಯೊಡ್ಡಿ ನೀ ಬಾಳದಿರು
ಗೀಳಿಲ್ಲದೆ ಕಾಲವನು ನೀ ವ್ಯಯಿಸದಿರು

ಗುರು ತೋರಿದ ಸನ್ಮಾರ್ಗವನು ನೀ ದೂರದಿರು
ಗೂಬೆಕೂರಿಸಿ ಮುಗ್ದರನು ನೀ ಕಪಟವಾಡದಿರು
ಗೃಹೀತ ಸತ್ವಗಳಾರಾಧನೆ ನೀ ತಿಳಿದಿರು
ಗೆಲ್ಲುವ ಛಲವದು ನೀ ಮರೆಯದಿರು

ಗೇಲಿಮಾಡುವ ಜಗಕೆ ನೀ ಅಂಜದಿರು
ಗೈರತ್ತು ಶಾಂತಮನಕೆ ನೀ ಹೆಸರಾಗಿರು
ಗೊಣಗುತ ಸತ್ಯವನು ನೀ ದೂರದಿರು
ಗೋರಿಯಾದರು ಸತ್ಯದುಸಿರಿಗೆ ನೀ ಹೆಸರಾಗಿರುವೆ ಅರಿತಿರು

ಗೌರವದ ಸಮಾಜಕೆ ನೀ ಕಳಸವಾಗು 
ಗಂಪಿಸುವ ಸಹೋದರತೆಗೆ ನೀ ತೇರಾಗು
ಗಹಕೂಪ ಶಾಂತಿಯನು ನೀ ನಿಬಂಧಿಸು ಬಾ
ಗಣ್ಯತೆಯ ಗದ್ದುಗೆಯಲಿ ಸಹಿಷ್ಣುತೆಯನು ನೀ ಸ್ಥಾಪಿಸು ಬಾ

ಘನಸಾರ ಸಂದೇಶಗಳನು ನೀ ಪಠಿಸುತಿರು
ಘಾತಕರೆದೆಗು ಸ್ನೇಹವನು ನೀ ಸೂಸುತಿರು
ಘಾತಿಸುವ ಮನವನು ನೀ ಹೂವಾಗಿಸು
ಘನ ಸಜ್ಜನರ ಮಹಲಲಿ ನೀ ನಗುತಿರು

ರಾಮಚಂದ್ರ ಸಾಗರ