Wednesday, 27 June 2018

ನೀ ಬಾಳಿನ ಬೆಂಗಾವಲು

ಬೆಡಗಿ..
ನಿನ್ನ ಬಾಹು ಬಂಧನವೆ
ನನ್ನ ಬಾಳಿನ ರಕ್ಷೆಯು
ನಿನ್ನ ಕಣ್ಣಿನ ಕಾಂತಿಯೆ
ನನ್ನ ಬಾಳಿನ ಬೆಳಕು

ನೀ ತೋರುವ ಜಗವೆ
ನನ್ನ ಬದುಕಿಗೆ ಮುನ್ನುಡಿಯು
ನೀ ಕರೆದ ದಾರಿಯೆ
ನೋವಿರದ ಬಾಳ್ವೆಯು

ನೀ ನಲಿವ ಜಗವೆ
ಒಲವರಂಗಿನ ಅಂಗಳವು
ನೀ ಕೈಹಿಡಿದ ಕ್ಷಣವೆ
ಸುಯೋಗದ ಅಭಿಷೇಕವು

ನಿನ್ನ ಮುದ್ದು ಮೊಗವೆ
ಮನದ ನೋವಿಗೆ ಪರಿಹಾರವು
ನಿನ್ನ ತುಂಟ ನಗುವೆ
ಸಿಹಿಯಾಮೃತದ ಒಡಲು

ನಿನ್ನ ಸವಿ ಮಾತಿನ ನುಡಿಯೆ
ಬಾಳಿಗೆಲ್ಲ ಸಡಗರದ ಶರಧಿಯು
ನಿನ್ನ ಸತ್ಕಾರದ ನಡೆಯೆ
ಬಾಳ ನೌಕೆಗೆ ಬೆಂಗಾವಲು

ರಾಮಚಂದ್ರ ಸಾಗರ್

Tuesday, 26 June 2018

ನಿನ್ನ ನಂಬಿಕೆಯಲಿ

ನೀ ಕಾಣದೆ ಜಗದಲಿ
ಈ ಹೃದಯಕೆ ಹಿತವೆಲ್ಲಿ
ನೀ ಬಾರದೆ ಜೊತೆಯಲ್ಲಿ
ಈ ಬಾಳಿಗೆ ನಗುವೆಲ್ಲಿ

ನಾ ಕಾಣುವ ಕನಸಲ್ಲಿ
ನೀನಿರದೆ ಸ್ವರ್ಗದಲಿ ಸುಖವೆಲ್ಲಿ
ನಾ ಸಾಗುವ ಇರುಳು ಹಾದಿಯಲಿ
ನೀನಿರದೆ ಶಶಿಹಾಸಕೆ ಸೊಬಗೆಲ್ಲಿ

ನನ್ನ ಎದೆಯ ಗೂಡಲ್ಲಿ
ನಿತ್ಯ ನಿನದೆ ಜಪವಿಲ್ಲಿ
ಪ್ರತಿ ಘಳಿಗೆ ಮನದಲ್ಲಿ
ಬಿಡುವಿರದ ನಿನ್ನ ನೆನಪುಗಳಿಲ್ಲಿ

ನಿನ್ನ ಪ್ರೀತಿಯ ಉಸಿರಿನಲಿ
ನನ್ನ ಜೀವಕೆ ಉಳಿಗಾಲವೆಲ್ಲಿ
ನಿನ್ನೊಲವ ಬಂಧನದಲಿ
ನಾ ನಲಿಯುತಿರುವೆ ಸಿಹಿ ಮೆಲುಕಲಿ

ಕಾತರವು ಎದೆಯ ಗೂಡಲಿ
ನಿನ್ನೊಲುಮೆಯ ಮೋಹದಲಿ
ಹಠವು ಹಗಲು ಇರುಳಲಿ
ನೀ ಜೀವದ ಉಸಿರಾಗುವ ನಂಬಿಕೆಯಲಿ

ಗೆಳತಿ..
ನೀ ಬರುವೆಯೆಂದು
ಒಲವಿನಾ ರಕ್ಷೆಯ ಭಿಕ್ಷೆಯನು
ಬಾಳಿಗೆ ನೀಡುವೆಯೆಂದು ?

ರಾಮಚಂದ್ರ ಸಾಗರ್

Monday, 18 June 2018

ನಿನ್ನದಾಗಿರಲಿ

ಗೆಳತಿ..
ಬೆಡಗು  ತುಂಬಿದ ಚೆಲುವ ಜಗದಲಿ
ಸದಾ ನಗುವು ನಿನ್ನದಾಗಿರಲಿ 
ಸೊಗಸು ಅರಳಿದ ಹಸಿರು ಬನದಲಿ
ಒಲವ ತಂಗಾಳಿ ನಿನ್ನ ರಮಿಸಲಿ

ಸರೋವರದಲಿ ಅರಳಿದ ಹೂವು
ನಿನ್ನಂದಕೆ ಸೋತು ತಲೆಬಾಗಲಿ
ಹಸಿರೆಲೆಯಲಿ ಹೊಳೆವ ರಂಗು
ನಿನ್ನ ಮೊಗವ ನೇವರಿಸಲಿ

ಅಕ್ಕರೆಯ ನಿನ್ನ ಹೃದಯವು
ನೂರು ವರುಷ ಚಿರವಾಗಲಿ
ಸದಾ ನಿನ್ನ ಮೋಹದ ಕಡಲಲಿ
ನನ್ನ ಬಾಳು ಹರುಷದ ನೌಕೆಯಲಿ

ಬಂಧವಿರದ ಪ್ರೀತಿ ಜಗದಲಿ
ನಿನ್ನೊಲುಮೆಯ ನದಿಯು ಮೈದುಂಬಲಿ
ಕಾವಲಿಡುವ ನನ್ನ ಕಣ್ಣಲಿ
ನಿನ್ನ ಮೊಗವು ಸದಾ ನಗುತಿರಲಿ

ಅನುರಾಗದ ಸವಿ ಸ್ವರದಲಿ
ನಿನ್ನ ಸವಿ ನಾಮವೆ ಮೊಳಗಲಿ
ಪ್ರೇಮಿಸು ಎನ್ನುವ ನಿನ್ನೆದೆಯ ಸದ್ದಲಿ
ನನ್ನ ನಾಮವೇ ದನಿಸುತಿರಲಿ

ರಾಮಚಂದ್ರ ಸಾಗರ್

Sunday, 10 June 2018

ಅಕ್ಕರೆಯ ಮಡಿಲು

ಮುಸ್ಸಂಜೆಯ ವೇಳೆಯಲಿ
ವಿನೋದದ ಮಾಲೆಯಾದವಳು
ರಂಗೇರಿದ ಘಳಿಗೆಯಲಿ
ಪ್ರೀತಿಗೆ ಪುರಾವೆಯಾದವಳು

ಪ್ರೇಮದ ಪುಶ್ಕರಿಣಿಯಲಿ 
ಅರಳಿ ಘಮಿಸುವ ಹೂವು
ಪರಿಹಾಸದ ಮೊಗದಲಿ
ಮನ ಪುಳಕಿಸುವ ಉಸಿರು

ಹುಯಿಲಿಡುವ ನನ್ನ ಕನಸಲಿ
ಹುರುಪು ತುಂಬಿದ ಉಲ್ಲಾಸಿನಿಯು
ನನ್ನೆದೆಯ ಜಗುಲಿಯಲಿ
ಪ್ರೀತಿ ಚೆಲ್ಲಿದ ಜತೆಗಾತಿಯು

ಅನುರಾಗದ ಜಲಧಿಯಲಿ
ಉದಿತ ಒಲವ ಪಾವನೆಯು
ಗೆಲುವಿನ ಬಾಳಿನಲ್ಲಿ
ಜೊತೆ ನಗುವ ಜಯದಾತಳು

ಸ್ವಚ್ಛಂದದ ಮಾತಿನಲ್ಲಿ
ಅಭಯದ ಶುಭವಾಣಿ ನುಡಿದವಳು
ಮೆಲು ನಗುವ ಸೊಬಗಿನಲಿ
ಅಕ್ಕರೆಯ ಮಡಿಲಾದವಳು ನೀನು..

ರಚನೆ: ರಾಮಚಂದ್ರ ಸಾಗರ್
ಚಿತ್ರ ಕೃಪೆ: ಇಂಟರ್ನೆಟ್