ಮದುವೆಯೆಂದರೆ ಬದುಕೊಳಗೆ
ಪ್ರೀತಿ ದೀಪ ಬೆಳಗುವ ಸಂಭ್ರಮವು
ಮದುವೆಯೆಂದರೆ ಜೀವದೊಳಗೆ
ಎದೆಯದನಿಗೊಲಿದ ಜೀವಾತ್ಮವು
ಮದುವೆಯೆಂದರೆ ಜೀವದುಸಿರಿನಲಿ
ಬೆಸೆದ ಜೀವಗಳ ಉಲ್ಲಾಸವು
ಮದುವೆಯೆಂದರೆ ಗಾನದೊಳಗೆ
ಮೊಳಗುವ ಪದಗಳ ಅನುಬಂಧವೂ
ಮದುವೆಯೆಂದರೆ ಮನುಕುಲದುಳುವಿಗೆ
ಒಲುಮೆಯಾ ದಿವ್ಯ ಚೇತನವು
ಮದುವೆಯೆಂದರೆ ಜಗದೊಳಗೆ
ಮಮತೆ ಪ್ರೇಮದ ಹಂದರವು
ಮದುವೆಯೆಂದರೆ ಒಲವ ಜಲಧಿಯಲಿ
ಪಳಿಸುವ ಬೆಳುದಿಂಗಳ ಸೊಬಗು
ಮದುವೆಯೆಂದರೆ ಬಾಳ ಪಥದಲಿ
ಒಲವ ಸಾನಿಧ್ಯ ಸಿದ್ಧಿಸುವ ಘಳಿಗೆಯು
ಮದುವೆಯೆಂದರೆ ಪ್ರೇಮಸೌಧದೊಳಗೆ
ಒಲವಾಮೃತ ಸವಿಯುವ ಸಡಗರವು
ಮದುವೆಯೆಂದರೆ ಒಲವನೌಕೆಯೊಳಗೆ
ಸಾರಥಿಯಾಗುವ ಮನದಾಸೆಯು
ಮದುವೆಯೆಂದರೆ ಒಲವ ಮಂದಿರದೊಳಗೆ
ನಿತ್ಯ ಪೂಜಿಸುವ ಪೂಜ್ಯ ಬಂಧವೂ
ಮದುವೆಯೆಂದರೆ ಕುಟೀರದೊಳಗೆ
ಬೆಸೆದ ಮನಗಳ ಸಿಂಗಾರ ಬಂಧವೂ
ಮದುವೆಯೆಂದರೆ ಬಾಳೊಳಗೆ
ತ್ಯಾಗ ಮಮತೆಯ ಬಂಧವು
ಕಹಿ ಕರಗಿಸಿ ಸಿಹಿ ಸಿಂಚಿಸುವೆಡೆ
ಸಾಗುವ ಒಲುಮೆಯ ಹಠವು
ರಾಮಚಂದ್ರ ಸಾಗರ್
ನಿನ್ನೊಲುಮೆಯ ಸೌಮ್ಯ ನಗುವ ಮೋಹದಲ್ಲಿ
ಬಾಳು ಪ್ರೇಮದ ಹೊನಲಾಯಿತು ಬೆಡಗಿ
ನಿನ್ನೊಲುಮೆಯ ಸೌರಭದ ಹೂ ಬನದಲ್ಲಿ
ಬಾಳು ಸದಾ ಕಂಪಿಸುವ ಗೂಡಾಯಿತು
ಪ್ರೇಮದ ಕುಸುಮ ಬಾಳಲಿ ಅರಳಿತು ಬೆಡಗಿ
ಪ್ರೀತಿ ಸಿಂಚಿಸುವ ನಿನ್ನ ಹೂನಗೆಯಲ್ಲಿ
ನೋವು ದಹಿಸುವ ನಿನ್ನೊಲುಮೆಯ ಶಕ್ತಿಯಿರಲು
ಸಾಗುವ ಹಾದಿಯಲಿ ನೋವಿಗೆ ಜಾಗವೆಲ್ಲಿ
ಬೀಸುತಿದೆ ಪ್ರೇಮಿಯ ಸಿಹಿ ಮನದಲ್ಲಿ
ಪ್ರೇಮದ ಪರಿವಾದ ನವಿರು ಸಿಹಿಗಾಳಿ
ಹೃದಯದ ಮೊರೆವ ಸತ್ಕಾರದ ದನಿಯಲ್ಲು
ನಿನ್ನೊಲುಮೆಯ ಜೀವಸತ್ವ ಉಸಿರಾಡುತಿರಲು
ಎದೆಯ ದನಿಯಲಿ ಒಲವೇ ಪೂಜ್ಯವು
ಕ್ಷಣ ಕ್ಷಣವು ಪ್ರೀತಿಯೇ ಬಾಳಲಿ ದೈವವು
ನಿನ್ನೊಲುಮೆಯ ಸಾಂಗತ್ಯವೇ ಸುಯೋಗವು
ಕಾತರಿಸು ತಂಪಿರುಳು ಕನಸುಗಳಲ್ಲಿ
ಮೆಲು ನಗುವ ಬೊಂಬೆ ನೀನಾಗಿರಲು
ನಿನ್ನೊಲುಮೆಯ ಪ್ರೇಮ ಪರ್ವದಲಿ
ಬಾಳಿನಾ ಕನಸು ನನಸಾಗಿಸು ಬಾ
ಹೃದಯದ ಮೊರೆಯ ಕೇಳು ಬಾ
ಹೃದಯ ಸೌಂಧರ್ಯದಲಿ ಮನ ಗೆದ್ದವಳು
ಬಾಳಿಗೊಲಿದ ಚೆಲುವ ತನಯೆ ನೀನಾಗಿರಲು
ಬಾಳಿಗೆ ಸತ್ಕಾರ ಕನಸಾಗಿ ಬಾ
ಸದಾ ಬಾಳಿಗೆ ಜಯದಾತಳಾಗು ಬಾ
ಬಾಳಲಿ ನಿತ್ಯ ನಗುವ ಹೂವಾಗಿ ಬಾ ಬೆಡಗಿ
ರಾಮಚಂದ್ರ ಸಾಗರ್
ಸಾಗಿ ಬಾ ಗೆಳತಿ ನೀ ಸಾಗಿ ಬಾ
ನಿನ್ನೊಲವ ರಂಗನು ತುಸು ನೀಡು ಬಾ
ಮೆಲು ನಗುವ ಸೋಜಿಗದ ಮೊಗದಲಿ
ಕಳೆಯೇರಿಸಿ ನಲಿಸು ಬಾ ಬಾಳನು
ರಂಗಿನ ಕನಸುಗಳ ಜಾತ್ರೆಯಲಿ
ನಗುತಾ ಸಾಂಗತ್ಯವ ನೀಡು ಬಾ
ಪ್ರೇಮಸುಧೆಯ ಜಲಧಿಯಲಿ
ನಿನ್ನೊಲವ ರಂಗು ಅಲೆಯಾಗಿಸು ಬಾ
ಒಲಿದು ಬಾ ಗೆಳತಿ ನೀ ಒಲಿದು ಬಾ
ಪ್ರೇಮದ ರಂಗನು ಲೇಪಿಸು ಬಾ
ರಂಗಾದ ಮನಸಿಗೆ ಜೊತೆಯಾಗು ಬಾ
ರಂಗೇರಿಸುವ ಕನಸುಗಳ ಸಂತೈಸು ಬಾ
ಮೋಹದ ಸೌಧಕೆ ಒಡತಿಯಾಗು ಬಾ
ಪ್ರೀತಿಯ ನೌಕೆಗೆ ಸಾರಥಿಯಾಗು ಬಾ
ಒಲುಮೆಯ ಹಾದಿಗೆ ಬೆಳಕಾಗು ಬಾ
ರಂಗು ಸೂಸುವ ಕನಸು ನೀನಾಗಿ ಬಾ
ನಿನ್ನೊಲವ ರಂಗೇರಿದ ಜಗದಲಿ
ಬಯಸಿದ ಮನಕೆ ಉಸಿರಾಗು ಬಾ
ರಂಗು ತುಂಬಿದ ಮೊಗದಲಿ
ಒಲವಿನ ಕರೆಯ ನೀಡು ಬಾ
ರಾಮಚಂದ್ರ ಸಾಗರ್
ನಿನ್ನೊಲುಮೆಯ ಪಥದಲಿ ನೀ ಕೈಹಿಡಿದು ಸಾಗುವಾಗ
ಪ್ರೇಮಸೌಧವು ನಮ್ಮೊಲವ ಬಾಳಿಗೆ ಕೈ ಬೀಸಿ ಕರೆದಂತೆ
ನಿನ್ನಕ್ಕರೆಯ ಸವಿ ಮಾತಿನಲಿ ನೀ ಒಲಿದು ನುಡಿವಾಗ
ಪ್ರೇಮಸುಧೆಯು ನಮ್ಮಲವ ಬಾಳಿಗೆ ಸುಯೋಗ ತಂದಂತೆ
ನಿನ್ನೊಲುಮೆಯ ಒಡನಾಟದಲಿ ನೀ ಮುದ್ದಾಗಿ ನಗುವಾಗ
ಪ್ರೇಮದ ಬಳ್ಳಿಯಲಿ ಹೂಗಳರಳಿ ಬಾಳಿಗೆ ಹಾರೈಸಿದಂತೆ
ಒಲುಮೆಯ ಪಥದಲಿ ನೀ ಬಳುಕುತ ನಡೆವಾಗ
ಪ್ರೇಮ ಬನದ ಕುಸುಮಗಳು ನಿನ್ನೆಡೆಗೇ ಬಾಗಿದಂತೆ
ನಿನ್ನೊಲುಮೆಯ ಬಂಧದಲಿ ನಾ ನಗುತ ಸಾಗುವಾಗ
ಸಿಹಿಯಾಮೃತವನು ನೀ ಹಾದಿಯುದ್ದ ಉಣಿಸಿದಂತೆ
ಒಲುಮೆಯ ಕಲ್ಯಾಣದಲಿ ನೀ ವೈಭವದ ತೇರಾದಾಗ
ಬತ್ತದಾ ಪ್ರೇಮದ ಹೊನಲು ಬಾಳಾಗಿ ಹರಿವಂತೆ
ಅಭ್ಯುದಯ ಪ್ರೀತಿಯ ಎದೆಯಲಿ ನೀ ಅರಳಿಸಿ ನಡೆವಾಗ
ಎದೆಯ ದನಿಯಲಿ ನಿನ್ನೊಲವ ಪದಗಳೇ ಜೀವಾಮೃತವಾದಂತೆ
ಕಾರ್ಮುಗಿಲ ಬಾನಿನಲಿ ಮಿಂಚೊಂದು ಬಳುಕಿ ಬೆಳಗಿದಾಗ
ಹೂನಗುವ ನಿನ್ನ ಮೊಗವು ಪ್ರೇಮದ ಜಲಧಿಯಾದಂತೆ
ನಿನ್ನೊಲುಮೆಯ ಅಭಯದಾ ನುಡಿಯಲಿ ನಾ ಸಾಗುವಾಗ
ಕಪ್ಪಿರುಳ ಹಾದಿಯು ಬೆಳುದಿಂಗಳು ಹೊಳಪಲ್ಲಿ ಹೊಳೆದಂತೆ
ನಿನ್ನೊಲವ ಸಾನಿಧ್ಯದಲಿ ಪ್ರೇಮದಲೆಯಲಿ ನಾ ಬದುಕುವಾಗ
ಪ್ರೇಮ ಜಗದಲಿ ನಿನ್ನ ಮಡಿಲಲಿ ಬಾಳು ಸಾರ್ಥಕವಾದಂತೆ..
ರಾಮಚಂದ್ರ ಸಾಗರ್