Monday, 12 March 2018

ಬಾರೇ ಬೆಡಗಿ..

ನಿನ್ನೊಲುಮೆಯ ಸೌಮ್ಯ ನಗುವ ಮೋಹದಲ್ಲಿ
ಬಾಳು ಪ್ರೇಮದ ಹೊನಲಾಯಿತು ಬೆಡಗಿ
ನಿನ್ನೊಲುಮೆಯ ಸೌರಭದ ಹೂ ಬನದಲ್ಲಿ
ಬಾಳು ಸದಾ ಕಂಪಿಸುವ ಗೂಡಾಯಿತು 
ಪ್ರೇಮದ ಕುಸುಮ ಬಾಳಲಿ ಅರಳಿತು ಬೆಡಗಿ

ಪ್ರೀತಿ ಸಿಂಚಿಸುವ ನಿನ್ನ ಹೂನಗೆಯಲ್ಲಿ
ನೋವು ದಹಿಸುವ ನಿನ್ನೊಲುಮೆಯ ಶಕ್ತಿಯಿರಲು
ಸಾಗುವ ಹಾದಿಯಲಿ ನೋವಿಗೆ ಜಾಗವೆಲ್ಲಿ
ಬೀಸುತಿದೆ ಪ್ರೇಮಿಯ ಸಿಹಿ ಮನದಲ್ಲಿ 
ಪ್ರೇಮದ ಪರಿವಾದ ನವಿರು ಸಿಹಿಗಾಳಿ

ಹೃದಯದ ಮೊರೆವ ಸತ್ಕಾರದ ದನಿಯಲ್ಲು
ನಿನ್ನೊಲುಮೆಯ ಜೀವಸತ್ವ ಉಸಿರಾಡುತಿರಲು
ಎದೆಯ ದನಿಯಲಿ ಒಲವೇ ಪೂಜ್ಯವು
ಕ್ಷಣ ಕ್ಷಣವು ಪ್ರೀತಿಯೇ ಬಾಳಲಿ ದೈವವು
ನಿನ್ನೊಲುಮೆಯ ಸಾಂಗತ್ಯವೇ ಸುಯೋಗವು 

ಕಾತರಿಸು ತಂಪಿರುಳು ಕನಸುಗಳಲ್ಲಿ 
ಮೆಲು ನಗುವ ಬೊಂಬೆ ನೀನಾಗಿರಲು
ನಿನ್ನೊಲುಮೆಯ  ಪ್ರೇಮ ಪರ್ವದಲಿ
ಬಾಳಿನಾ ಕನಸು ನನಸಾಗಿಸು ಬಾ 
ಹೃದಯದ ಮೊರೆಯ ಕೇಳು ಬಾ

ಹೃದಯ ಸೌಂಧರ್ಯದಲಿ ಮನ ಗೆದ್ದವಳು
ಬಾಳಿಗೊಲಿದ ಚೆಲುವ ತನಯೆ ನೀನಾಗಿರಲು
ಬಾಳಿಗೆ ಸತ್ಕಾರ ಕನಸಾಗಿ ಬಾ 
ಸದಾ ಬಾಳಿಗೆ ಜಯದಾತಳಾಗು ಬಾ 
ಬಾಳಲಿ ನಿತ್ಯ ನಗುವ ಹೂವಾಗಿ ಬಾ ಬೆಡಗಿ

ರಾಮಚಂದ್ರ ಸಾಗರ್

Thursday, 1 March 2018

ನಿನ್ನೊಲವ ರಂಗು..

ಸಾಗಿ ಬಾ ಗೆಳತಿ ನೀ ಸಾಗಿ ಬಾ
ನಿನ್ನೊಲವ ರಂಗನು ತುಸು ನೀಡು ಬಾ
ಮೆಲು ನಗುವ ಸೋಜಿಗದ ಮೊಗದಲಿ
ಕಳೆಯೇರಿಸಿ ನಲಿಸು ಬಾ ಬಾಳನು

ರಂಗಿನ ಕನಸುಗಳ ಜಾತ್ರೆಯಲಿ
ನಗುತಾ ಸಾಂಗತ್ಯವ ನೀಡು ಬಾ
ಪ್ರೇಮಸುಧೆಯ ಜಲಧಿಯಲಿ
ನಿನ್ನೊಲವ ರಂಗು ಅಲೆಯಾಗಿಸು ಬಾ

ಒಲಿದು ಬಾ ಗೆಳತಿ ನೀ ಒಲಿದು ಬಾ
ಪ್ರೇಮದ ರಂಗನು ಲೇಪಿಸು ಬಾ
ರಂಗಾದ ಮನಸಿಗೆ ಜೊತೆಯಾಗು ಬಾ
ರಂಗೇರಿಸುವ ಕನಸುಗಳ ಸಂತೈಸು ಬಾ

ಮೋಹದ ಸೌಧಕೆ ಒಡತಿಯಾಗು ಬಾ
ಪ್ರೀತಿಯ ನೌಕೆಗೆ ಸಾರಥಿಯಾಗು ಬಾ
ಒಲುಮೆಯ ಹಾದಿಗೆ ಬೆಳಕಾಗು ಬಾ
ರಂಗು ಸೂಸುವ ಕನಸು ನೀನಾಗಿ ಬಾ

ನಿನ್ನೊಲವ ರಂಗೇರಿದ ಜಗದಲಿ
ಬಯಸಿದ ಮನಕೆ ಉಸಿರಾಗು ಬಾ
ರಂಗು ತುಂಬಿದ ಮೊಗದಲಿ
ಒಲವಿನ ಕರೆಯ ನೀಡು ಬಾ

ರಾಮಚಂದ್ರ ಸಾಗರ್

Saturday, 24 February 2018

ನಿನ್ನೊಲುಮೆಯ ಪಥದಲಿ

ನಿನ್ನೊಲುಮೆಯ ಪಥದಲಿ ನೀ ಕೈಹಿಡಿದು ಸಾಗುವಾಗ
ಪ್ರೇಮಸೌಧವು ನಮ್ಮೊಲವ ಬಾಳಿಗೆ ಕೈ ಬೀಸಿ ಕರೆದಂತೆ
ನಿನ್ನಕ್ಕರೆಯ ಸವಿ ಮಾತಿನಲಿ ನೀ ಒಲಿದು ನುಡಿವಾಗ
ಪ್ರೇಮಸುಧೆಯು ನಮ್ಮಲವ ಬಾಳಿಗೆ ಸುಯೋಗ ತಂದಂತೆ

ನಿನ್ನೊಲುಮೆಯ ಒಡನಾಟದಲಿ ನೀ ಮುದ್ದಾಗಿ ನಗುವಾಗ
ಪ್ರೇಮದ ಬಳ್ಳಿಯಲಿ ಹೂಗಳರಳಿ ಬಾಳಿಗೆ ಹಾರೈಸಿದಂತೆ
ಒಲುಮೆಯ ಪಥದಲಿ ನೀ ಬಳುಕುತ ನಡೆವಾಗ
ಪ್ರೇಮ ಬನದ ಕುಸುಮಗಳು ನಿನ್ನೆಡೆಗೇ ಬಾಗಿದಂತೆ

ನಿನ್ನೊಲುಮೆಯ ಬಂಧದಲಿ ನಾ ನಗುತ ಸಾಗುವಾಗ
ಸಿಹಿಯಾಮೃತವನು ನೀ ಹಾದಿಯುದ್ದ ಉಣಿಸಿದಂತೆ
ಒಲುಮೆಯ ಕಲ್ಯಾಣದಲಿ ನೀ ವೈಭವದ ತೇರಾದಾಗ
ಬತ್ತದಾ ಪ್ರೇಮದ ಹೊನಲು ಬಾಳಾಗಿ ಹರಿವಂತೆ

ಅಭ್ಯುದಯ ಪ್ರೀತಿಯ ಎದೆಯಲಿ ನೀ ಅರಳಿಸಿ ನಡೆವಾಗ
ಎದೆಯ ದನಿಯಲಿ ನಿನ್ನೊಲವ ಪದಗಳೇ ಜೀವಾಮೃತವಾದಂತೆ
ಕಾರ್ಮುಗಿಲ ಬಾನಿನಲಿ ಮಿಂಚೊಂದು ಬಳುಕಿ ಬೆಳಗಿದಾಗ
ಹೂನಗುವ ನಿನ್ನ ಮೊಗವು ಪ್ರೇಮದ ಜಲಧಿಯಾದಂತೆ

ನಿನ್ನೊಲುಮೆಯ ಅಭಯದಾ ನುಡಿಯಲಿ ನಾ ಸಾಗುವಾಗ
ಕಪ್ಪಿರುಳ ಹಾದಿಯು ಬೆಳುದಿಂಗಳು ಹೊಳಪಲ್ಲಿ ಹೊಳೆದಂತೆ
ನಿನ್ನೊಲವ ಸಾನಿಧ್ಯದಲಿ ಪ್ರೇಮದಲೆಯಲಿ ನಾ ಬದುಕುವಾಗ
ಪ್ರೇಮ ಜಗದಲಿ ನಿನ್ನ ಮಡಿಲಲಿ ಬಾಳು ಸಾರ್ಥಕವಾದಂತೆ..

ರಾಮಚಂದ್ರ ಸಾಗರ್

Sunday, 18 February 2018

ನೀ ಪ್ರೇಮದ ಹೊನಲು

ಒಲವ ಸೌರಭದಲ್ಲಿ ಕಂಪಿಸುವ ಕುಸುಮವೇ
ಒಲವ ಸೌಧದಲಿ ಬೆಳುಗುವ ದೀಪವೇ
ಒಲವ ಪಥದಲಿ ಕೈ ಹಿಡಿದ ಜೀವವೇ
ಒಲವ ಮೇಳದಲಿ ದನಿಸಿದ ಸ್ವರವೇ
ಬಾಳಲಿ ನೀನೊಂದು ಬತ್ತದಾ ಪ್ರೇಮದ ಹೊನಲು

ಪ್ರೀತಿಯ ಸೌಜನ್ಯದಲಿ ಹೃದಯ ಬೆಸೆದವಳೇ
ನಗುಧಾರೆಯ ಹಿತದಲಿ ಕನಸುಗಳ ಸಂತೈಸಿದವಳೇ
ಬೆಳುದಿಂಗಳು ಬೆಳಕಲಿ ಪ್ರೇಮದ ಹಂದರ ಹೆಣೆದವಳೇ
ಅಭಯದ ನುಡಿಯಲಿ ತನುವಿಗೆ ನೆರಳಾದವಳೇ
ಬಾಳಲಿ ನೀನೊಂದು ಅಭಯದಾ ವರವು

ಮೆಲುನಗುವಲಿ ಒಲವ ಜಗವ ಸಿಂಗರಿಸಿದವಳೇ
ಮಮತೆಯ ಗಾದಿಯಲಿ ಒಲವಾಮೃತ ಉಣಿಸಿದವಳೇ
ಕಾನನದ ಕಪ್ಪಿರುಳು ಬಿಳುಪಾಗಿಸಿದ ಜೀವವೇ
ಸುಯೋಗದ ಪ್ರೀತಿಯನು ಕರುಣಿಸಿದ ಕನ್ನಿಕೆಯೇ
ಬಾಳಲಿ ನೀ ಸದಾ ಸುರಿವಾ ಒಲವ ಮಳೆಯು

ಕನಸಿಗನೆದೆಯ ದನಿಯಲಿ ಗುನುಗವ ಗೀತೆಯಾದವಳೇ
ಪ್ರೇಮದ ಕಟ್ಟಳೆಯಲಿ ಬಾಳ ಬಂಧಿಸಿದವಳೇ
ಹೃದಯ ಸೌಂದರ್ಯದಲಿ ಮನಕೆ ದೊರೆಯಾದವಳೇ
ಉಲ್ಲಾಸದ ಮೇನೆಯಲಿ ಜೊತೆಯಾಗಿ ನಗುವವಳೇ
ಬಾಳಲಿ ನೀ ಸದಾ ಉಲ್ಲಾಸದ ಚಿಲುಮೆಯು

         ರಾಮಚಂದ್ರ ಸಾಗರ್