ಬಾಳಿನ ಹಾದಿಯಲಿ ನಗುಧಾರೆಯ ಬೊಂಬೆಯಾಗಿ
ಬಿನ್ನಾಣದ ನಗುವಿನಲಿ ಹೂಮಳೆಯಾ ಸಿರಿಯಾಗಿ
ಬಿಚ್ಚು ಮಾತಿನಲಿ ಪ್ರೀತಿಗೆ ತೇರಾಗುತಾ
ಬಾಳ ನೌಕೆಗೆ ಒಲವ ಸಾರಥಿ ನೀನಾಗುತಾ
ಕೈ ಹಿಡಿದು ಸಾಗುತಿರಲು ಕ್ಷಣ ಕ್ಷಣವೂ ಸಂಭ್ರಮವೂ
ಮೌನ ಭಾಷೆಯ ಪ್ರೇಮ ಸಲ್ಲಾಪದ ಮಧುವು
ಮೌಲಿಕ ಮನದ ಪ್ರೀತಿಯ ಮಂಟಪವು
ಮಧುರ ಪಯಣದ ಒಲವ ಇಂಧನವು
ಮನೋಜ್ಞ ಪಥದ ಸಿಂಗಾರದ ಚಿಲುಮೆಯು
ಜೊತೆಯಾಗಿರಲು ಕ್ಷಣ ಕ್ಷಣವೂ ಮಧುವೂ
ಬೀಗುವ ಮನದ ಒಲವ ತೇಜಸ್ವಿಯು
ಸೌಜನ್ಯದ ಬಾಳಿಗೆ ಸಂಪನ್ನ ಆಸರೆಯು
ಸಂದೇಹದ ಮುಳ್ಳಿಗೆ ಸಂಕೋಲೆ ತೊಡಿಸಿದವಳು
ಒಡಕುದನಿ ಮೂಡದಂತೆ ಮನ ಬೆಸೆದವಳು
ಜೊತೆಯಲಿರಲು ಕ್ಷಣ ಕ್ಷಣವೂ ಸಿರಿಗಂಧವೂ
ಒಲವ ಸೌರಭದಲಿ ಬಾಳಿಗೆ ರಂಗೇರಿಸಿದವಳು
ಹೃದಯ ಸೌಂದರ್ಯದಲಿ ಮನ ಬಂಧಿಸಿದವಳು
ಸೌಹಾರ್ದ ಮನದಲಿ ಬಾಳಿಗೆ ಸಿಂಗಾರವಾದವಳು
ಸೌಮ್ಯದ ನಗುವಿನಲಿ ಬಾಳ ನೌಕೆ ಎಳೆವವಳು
ನವಿರಾಗಿ ನಗುತಿರಲು ಕ್ಷಣ ಕ್ಷಣವೂ ಪ್ರೀತಿಯ ಅಭಿಷೇಕವೂ
ರಾಮಚಂದ್ರ ಸಾಗರ್
ನಗುವ ನಯನಗಳಲಿ ನೀನಿಳಿದೆ
ಗೆಳತಿ ಮನದ ಮನೆಯೊಳಗೆ
ಮುಸ್ಸಂಜೆ ರಂಗಲಿ ಪ್ರೀತಿಯಲೆಯಲಿ
ಬಾಳಿಗೆ ಕರೆವವಳು ನೀನಾದೆ..
ಪ್ರೀತಿ ಕುಸುಮ ನೀನರಳಿಸಿದೆ
ಗೆಳತಿ ಪ್ರೇಮ ನಾವೆಯೊಳಗೆ
ಒಲವ ಸೌಗಂಧ ಲೇಪಿಸಿದೆ
ಗೆಳತಿ ನಿನ್ನ ಅನುರಾಗದ ಛಲದೊಳಗೆ
ಒಲವ ಮೆರವಣಿಗೆ ಹೊರಡಿಸಿದೆ
ಗೆಳತಿ ನಿನ್ನೊಲವು ತುಂಬಿದ ಜಗದೊಳಗೆ
ನವಿರು ಸ್ಪರ್ಷದಲಿ ಶೃಂಗಾರಕೆ
ಗೆಳತಿ ಮಧುರ ಕನಸು ಕಣಜ ನೀನಾದೆ
ಚೆಲುವ ಕುಸುಮಗಳ ಜಗದೊಳಗೆ
ಗೆಳತಿ ಮೇಳೈಸುವ ಬೆಡಗಿ ನೀನಾದೆ
ತಣಿಸುವ ತಂಗಾಳಿಯಲಿ ಪ್ರೀತಿಯಲೆ
ಕರೆತರುವ ವಯ್ಯಾರಿಯು ನೀನಾದೆ
ಮೆತ್ತನೆ ಮರೆಯಾಗುವ ರವಿಗು
ತುಸು ನಿಧಾನಿಸಲು ಕಾರಣವು ನೀನಾದೆ
ಬಾಳ ಪಥದೊಳಗೆ ಒಲವ ಕುಸುಮ
ಬಾಡದೇ ಉಳಿಸುವ ಬೆಡಗಿ ನೀನಾದೆ..
ಬಾಳಿಗೆ ಒಲಿದ ಸಿಹಿಯಾಮೃತ ನೀನಾದೆ..
ರಾಮಚಂದ್ರ ಸಾಗರ್
ಗೆಳೆಯಾ ನೀನಿರದ ಅರಮನೆಯಲ್ಲಿ
ಬೆಳಗುವ ದೀಪಗಳಲಿ ಬೆಳಕೆಂಬುದು ಭ್ರಮೆಯು
ಗೆಳೆಯಾ ನೀನಿರದ ನನ್ನ ಮನದಲ್ಲಿ
ಬದುಕುವ ಛಲದಲಿ ಹಂಬಲವೂ ಕಾಣದು
ನಲಿವ ಬದುಕೆಂಬುದು ಮರೀಚಿಕೆಯು
ಗೆಳೆಯಾ ನೀ ಕಾಣದೇ ಇರಲು
ಜಗದ ಮೂಲೆ ಮೂಲೆಯು ಭಯದ ಗೂಡು
ಸಾಗುವ ಪಥದಲಿ ನಲಿವೆಂಬುದು ನಶ್ವರವು
ಸಾಗುವ ಬನದ ಹಾದಿಯು ಬೆಂಕಿಯಾ ಪಥವೂ
ಭಯದಾ ಬದುಕಲ್ಲಿ ಬಾಳು ಉಳಿವುದೇನು ?
ನಿನ್ನ ಭರವಸೆಯ ಹಾಡಿರದೇ ಈ ಬಾಳಲಿ
ನಾ ಹೇಗೆ ನಗುತ ನಲಿಯಲಿ ಜಗದಲಿ
ನಿನ್ನ ಅಭಯದಾ ಪದಗಳ ಕೊರತೆಯಲಿ
ನಾ ಹೇಗೆ ರೋಧಿಸುವ ಹೃದಯವಾ ಸಂತೈಸಲಿ
ನೊಂದ ಮನದ ಬೇಗೆಯ ನಿನಗೇಗೆ ಹೇಳಲಿ
ನಿನ್ನ ಜೊತೆಯ ಭಾಗ್ಯವಿರದ ಈ ಬಾಳಲಿ
ನಗುವೆಂಬುದು ನನಗೆ ಕ್ಷಯವಾಗುವ ಕ್ಷಣವು
ನಿನ್ನ ಚಪ್ಪಾಳೆಯ ಸದ್ದಿರದ ಈ ಜಗದಲಿ
ನಾ ಹೇಗೆ ಹೆಜ್ಜೆ ಹಾಕಲಿ ಕಾಲ್ಗೆಜ್ಜೆಗೆ ಕೆಲಸವೆಲ್ಲಿ ?
ನಲಿವ ಮನದಾಸೆಗಿನ್ನೂ ನೋವೆಣಿಸುವ ಕೆಲಸವು
ಗೆಳೆಯಾ ನೀನಿರದೇ ತಂಪಿರುಳು
ಉರಿವ ಮರಳುಗಾಡು
ಗೆಳೆಯಾ ನೀನಿರದೇ ಈ ಬಾಳು
ನೋವ ಶರಧಿಯಲಿ ಮುಳುಗುವಾ ನೌಕೆಯು
ಮೆಲು ನಗುವ ಮೊಗದಲ್ಲಿ ನೀ ಅಗಮಿಸು
ಬದುಕು ಬೆಳಗುವಾ ದೀಪವಾಗು
ನೋವ ಶರಧಿಯ ನೀ ಕರಗಿಸು
ಹೊಂಗನಸು ಚೆಲ್ಲುವಾ ಮನದರಸನಾಗು..
ರಾಮಚಂದ್ರ ಸಾಗರ್
ಓ ನನ್ನ ಪ್ರೀತಿಯ ಮುಸ್ಸಂಜೆಯ ರವಿಯೇ
ನೀ ಮುಳುಗದೇ ತುಸು ನಿಲ್ಲು ನಿಲ್ಲು
ಮನದ ನಾವಿಕನಿಂದು ಬಂದೇ ಬರುವನು
ನನ್ನ ವಿರಹದ ನೋವಿಗೆ ಮೆಲು ನಗುವ
ಮುಲಾಮು ತರುವನೂ..
ಓ ನನ್ನ ಪ್ರೀತಿಯ ಕುಸುಮವೇ
ನೀ ಬಾಡದೇ ತುಸು ನಿಲ್ಲು ನಿಲ್ಲು
ನನ್ನೆದೆಯ ಒಡೆಯನಿಂದು ಬಂದೇ ಬರುವನು
ಪ್ರೀತಿಯ ಹೂಮಳೆಯನೇ ಸುರಿಸುವನೂ..
ಓ ನನ್ನ ಪ್ರೀತಿಯ ಶರಧಿಯೇ
ನೀ ರೋಧಿಸದೇ ತುಸು ನಿಲ್ಲು ನಿಲ್ಲು
ನನ್ನ ಮನದ ಚಂದ್ರಮನಿಂದು
ಒಲವ ತಂಪೆಳಕು ಚೆಲ್ಲುವನೂ..
ಓ ನನ್ನ ಪ್ರೀತಿಯ ಕಡಲಲೆಯೇ
ನೀ ನೋವೆಣಿಸುತಾ ಈ ವೇಳೆಯಲಿ ಬೀಸದಿರು
ಉಲ್ಲಾಸದ ಚಂದಿರ ನನ್ನವನು
ಮರೆಯದೇ ತರುವನು ಒಲವ ತಂಗಾಳಿಯನೂ..
ಓ ನನ್ನ ಪ್ರೀತಿಯ ಮುಸ್ಸಂಜೆಯ ಬೆಡಗೇ
ನೀ ಮಬ್ಬಾಗಿ ಕೊರಗದಿರು
ಸೊಗಸುಗಾರ ನನ್ನವನು
ತಂದೇ ತರುವನು ಒಲವ ಚಿತ್ತಾರವನೂ..
ರಾಮಚಂದ್ರ ಸಾಗರ್