ಒಲವ ಕಾಸಾರದಲಿ ಅರಳಿದ ಕುಸುಮವೇ
ಚೆಲುವ ಬನದಲಿ ಸುಳಿದಾಡಿದ ತಂಗಾಳಿಯೇ
ನೀಲಿ ಬಾನಲಿ ಹೊಮ್ಮಿದ ಬೆಳ್ಳಿ ಕಿರಣವೇ
ಸರೋವರದ ತಿಳಿನೀರಲಿ ಮೂಡಿದ ಬಿಂಬವೇ
ಅದು ನೀನಾಗಿಹೆ ಗೆಳತೀ..
ಪ್ರೀತಿಯ ಹಂದರದಲಿ ಕೈಹಿಡಿದ ಜೀವವೇ
ಕಾರ್ಗಾಲದ ಕತ್ತಲೆಯಲಿ ಬೆಳಕಾದ ದೀಪವೇ
ಕಂದರದ ಹಾದಿಯಲಿ ಕೈಹಿಡಿದು ಸಾಗಿದವಳೇ
ಸುಳಿ ತುಂಬಿದ ನದಿಯಲ್ಲಿ ಪಾರುಮಾಡಿದ ಪಾರಂಗತೆಯೇ
ಅದು ನೀನಾಗಿಹೆ ಗೆಳತೀ..
ಹೃದಯ ಸೌಂದರ್ಯದಲಿ ಅಜರಾಮರ ವನಿತೆ
ಅನಾಗತ ಜಗದಲ್ಲಿ ನವ್ಯತೆ ಕಾಣಿಸುವವಳೇ
ನೋವೆಣಿಸಿದ ಕ್ಷಣದಲ್ಲಿ ಸಾಂತ್ವಾನ ತಂದವಳೇ
ಬಾಳ ನಾವೆಗೆ ಇಂಧನ ತುಂಬಿದವಳೇ
ಅದು ನೀನಾಗಿಹೆ ಗೆಳತೀ..
ಅಚ್ಯುತ ಪ್ರೀತಿಯಲ್ಲಿ ರಂಗೋಲಿ ಎಳೆದವಳೇ
ಅಚಲ ಮನದಲ್ಲಿ ಗಿರಿಯಾಗಿ ನಿತ್ತವಳೇ
ಅನುಸಂಧಾನ ಬಾಳಲ್ಲಿ ರೂಪಿಸಿ ನಡೆಸುವವಳೇ
ಭವ್ಯತೆಯ ಬಂಧದಲಿ ನನ್ನ ಬಂಧಿಸಿದವಳೇ
ಅದು ನೀನಾಗಿಹೆ ಗೆಳತೀ..
ಜೀವದಲ್ಲಿ ಬೆರೆತ ಉಸಿರೇ
ಭಾವದಲ್ಲಿ ಬೆಸೆದ ಬಂಧುವೇ
ಅದು ನೀನಾಗಿಹೆ ಗೆಳತೀ..
ರಾಮಚಂದ್ರ ಸಾಗರ್
ಗೆಳೆಯಾ ನೀನೆಂದರೆ..
ಪ್ರೇಮ ನಾವೆಯೊಳಗೆ ಪ್ರೀತಿಯ ಹರಿಗೋಲಾದವನು
ಒಲವ ಜಲಧಿಯೊಳಗೆ ಸಂತಸದಲೆಯ ಎಬ್ಬಿಸಿದವನು
ಬದುಕೊಳಗೆ ಪ್ರೀತಿಯ ಹೂಮಳೆ ಸುರಿದವನು
ಮನದೊಳಗೆ ಪ್ರೀತಿಯ ಸೌಗಂಧವನು ಬಳಿದವನು
ಗೆಳೆಯಾ ನೀನೆಂದರೆ..
ತಂಪಿರುಳಲಿ ಶಶಿಯಾಗಿ ಬೆಳುದಿಂಗಳು ಚೆಲ್ಲಿದವನು
ಕಾರ್ಗತ್ತಲೆಯಲಿ ದಾರಿತೋರಿ ನಗುವವನು
ದಣಿದ ನನ್ನ ಮನದಲಿ ಚೈತನ್ಯಸೆಲೆಯಾದವನು
ಮುಸ್ಸಂಜೆ ಬಾನಲಿ ರಂಗು ಬಳಿದು ಮನ ನಲಿಸುವವನು
ಗೆಳೆಯಾ ನೀನೆಂದರೆ..
ಸವಿಘಳಿಗೆಯಲಿ ಪ್ರೀತಿ ಚಹರೆಯೊತ್ತಿದವನು
ಪ್ರೇಮಸಜಾದಲಿ ನನ್ನ ಬಂಧಿಸಿ ನಲಿಸುವವನು
ಸಕಲ ಜಗದಲಿ ಒಲವ ತೇರು ಎಳೆದವನು
ಸಂಪನ್ನ ಮನದಲಿ ನನ್ನ ಓಲೈಸಿ ನಗುವವನು
ಗೆಳೆಯಾ ನೀನೆಂದರೆ..
ಸೌಜನ್ಯದ ಪದಗಳಲಿ ನನ್ನ ಆಲಾಪಿಸಿ ನಲಿದವನು
ಸಡಗರಿಸುವ ನನ್ನ ಮನದಲಿ ಸದ್ದಿಲ್ಲದೆ ನೆಲೆಯಾದವನು
ಪ್ರೇಮ ಸಮರದಲಿ ನನ್ನ ಜಯಿಸಿದವನು
ಸಚ್ಚರಿತ ಗುಣಗಳ ಸಂಕಲನವಾದವನು
ಗೆಳೆಯಾ ನೀನೆಂದರೆ..
ಪ್ರೀತಿ ಸಮ್ಮೇಳನದಲಿ ಕೈಹಿಡಿದು ಜೊತೆಯಾದವನು
ಸವಿರಾಗದಲಿ ಮನ ಕಂಪಿಸುತ ಮನದರಸನಾದವನು
ಸಲಹುವ ನನ್ನ ಕಣ್ಣಿಗೆ ಉತ್ತರ ನೀನಾದವನು
ಬೇಡುವ ನನ್ನ ಮನಕೆ ಒಲವದೈವವಾದವನು..
ರಾಮಚಂದ್ರ ಸಾಗರ್
ನೀ ಕೈಹಿಡಿದು ನಗುತ ಜಗವ ಮುದ್ದಾಗಿ ತೋರುವಾಗ
ಹೊಸ ಜಗದಲ್ಲಿ ನಿನ್ನೊಲವ ಸಾನಿಧ್ಯದಲಿ ನಾ ನಲಿವಾಗ
ಸುಲಲಿತ ಭಾವದಲ್ಲಿ ಅನುರಾಗದ ಮಳೆಯು ಸುರಿದಂತೆ
ಮನದೀ ಸುಸಮಯದಿ ಸಂಭ್ರಮದ ಹೊನಲು ಹರಿದಂತೆ
ಆಗಸದ ತಾರೆಗಳು ನಿನ್ನ ನಯನದಲಿ ಪಳಿಸಿದಾಗ
ಮೂಡಣದ ರಂಗು ನಿನ್ನ ಮೊಗವ ನೇವರಿಸಿ ಕೆಂಪಾದಾಗ
ಹೊಸ ಕನಸು ರಂಗೇರಿಸುತ ಮನವ ಕಾಡಿದಂತೆ
ಇನಿದಾದ ಕನಸುಗಳು ಜೊತೆ ಸೇರಿ ನಲಿದಂತೆ
ನೀ ತುಸು ನಗುತಾ ನನ್ನೊಂದಿಗೆ ಹೆಜ್ಜೆಯಿಡುವಾಗ
ಸಾಗುವ ಪಥದಲಿ ಪ್ರೀತಿಯ ಹೂಮೊಗ್ಗೆ ಬಿರಿದು ನಕ್ಕಾಗ
ಅಕ್ಕರೆಯ ಸೌಗಂಧವು ಬಾಳಿಗೆ ಲೇಪನವಾದಂತೆ
ಮಮತೆಯ ಪರಿಮಳವು ಮನಕೆ ಕೃಪೆಯಾದಂತೆ
ನೀ ನಗುತ ನಡೆವಾಗ ನುಡಿದ ಇನಿದಾದ ನುಡಿಯ
ಸವಿ ಸಲ್ಲಾಪದ ಪದಗಳು ಹಾಡಾಗಿ ಗುನುಗಿದಾಗ
ಅನುಪಮ ರಾಗವು ಹೊಸಬಾಳಿಗೆ ಸ್ವಾಗತಿಸಿದಂತೆ
ಒಲವಗಾಥೆಯು ಬಾಳಿಗೆ ಮುನ್ನುಡಿ ನುಡಿದಂತೆ
ಬೆಳುದಿಂಗಳಲರಳಿದ ಕುಸುಮದಂತೆ ನೀನು ಬಿರಿದು ನಿಂತಾಗ
ಶಶಿಯನುಜಾತೆಯು ಕೈಹಿಡಿದಂತೆ ಮನ ಸಂಭ್ರಮಿಸಿ ನಲಿದಾಗ
ಪ್ರೀತಿ ನಾವೆಯಲ್ಲಿ ಮಮತೆಯ ಬಂಧದಲ್ಲಿ ನೀ ಬಂಧಿಸಿ ನಕ್ಕಂತೆ
ನಾ ನಗುತ ಸುಯೋಗದ ಪಥದಲಿ ಸಾಗಿದಂತೆ...
ರಾಮಚಂದ್ರ ಸಾಗರ್
ಬೆಡಗು ತುಂಬಿದ ನಿನ್ನ ನಗುವಿನಲ್ಲಿ
ಸೆರೆಯಾಗಿದೆ ಗೆಳತಿ ನನ್ನ ಮನಸು
ನಿತ್ಯ ಕಾತರಿಸುವ ನನ್ನ ಮನದಲ್ಲಿ
ಉತ್ತರವಾಗಿದೆ ಗೆಳತಿ ನಿನ್ನ ಹೆಸರು..
ಹೊಸತನ ಕರುಣಿಸಿದ ನಿನ್ನ ಮೋಹದಲಿ
ಹೊಂಗನಸು ಕಾಣುತಿದೆ ಗೆಳತಿ ನನ್ನ ಹೃದಯ
ಬೆಡಗು ತುಂಬಿದ ನಿನ್ನ ವಾತ್ಸಲ್ಯದಲ್ಲಿ
ನಲಿಯುತಿದೆ ಗೆಳತಿ ನನ್ನ ಹೃದಯ
ನಿತ್ಯ ಗುನುಗುತಿದೆ ಗೆಳತಿ ನಿನ್ನ ಹೆಸರು..
ಕಾಂತಿ ತುಂಬಿದ ನಿನ್ನ ನಯನದಲ್ಲಿ
ಹೊಳೆಯುತಿದೆ ಗೆಳತಿ ಬಾಳ ಪಥವು
ಅಕ್ಕರೆ ಬೆಸೆವ ನಿನ್ನ ಮೋಹದಲ್ಲಿ
ಅರಳುತಿದೆ ಗೆಳತಿ ಸಾವಿರ ಕನಸು..
ಕಾರಣವಾಗಿದೆ ಗೆಳತಿ ನಿನ್ನ ಹೆಸರು..
ಬಾಳು ಕಾವಲಿಡುವ ನಿನ್ನ ಅನುರಾಗದಲ್ಲಿ
ಹೂವಾಗಿದೆ ಗೆಳತಿ ನಮ್ಮ ಬದುಕು
ಒಮ್ಮನ ಬೆಸೆದ ನಮ್ಮ ಬಾಳ್ವೆಯಲ್ಲಿ
ಬಲ ಬಂದಿದೆ ಮನಕೆ ಹಗಲಿರುಳು..
ಛಲ ತುಂಬಿದೆ ಗೆಳತಿ ನಿನ್ನ ಹೆಸರು..
ರಾಮಚಂದ್ರ ಸಾಗರ್