Tuesday, 1 May 2018

ನೀನೆ ಜೀವಾತ್ಮನು

ಮುಸ್ಸಂಜೆ ರಂಗು ನಮಗೆ ಹೊನ್ನೆಂದು ನಕ್ಕವನು
ಜಗದ ಸೊಬಗು ರಮ್ಯತೆಯ ಗೂಡಾಗಿರಲು
ಹೊಳೆವ ಸೊಬಗಿನ ಹಾದಿಯಲಿ ನಡೆಸಿದವನು
ಮನದ ದುಗುಡ ಮರೆಸಿ ನಲಿಸಿದವನು

ಬಿರುಗಾಳಿ ಬೀಸುವಾಗ ಅಭಯದಾ ಬೆಸುಗೆಯಲಿ
ಕೈಹಿಡಿದು ಜಗವ ಮುದ್ದಾಗಿ ತೋರಿದ ಜೀವಾತ್ಮನು
ಕಾಂತಾರದ ದುರ್ಗಮದಲಿ ಅಳುಕಿನ ಹಾದಿಯಲ್ಲಿ
ಕೈದೀಪವಾಗಿ ದಾರಿ ತೋರಿದ ಚಂದ್ರಮನು

ಕಿರುಬೆರಳಿಗೆ ನಗುತ ಸಾಂಗತ್ಯ ನೀಡಿ
ಮುಳುಗುವ ರವಿಯು ಮತ್ತೆ ಬರುವನು
ಕಹಿ ಕರಗಿ ಸಂತಸ ಸಡಗರ ತರುವನು
ದುಗುಡವಡಗಿಸಿ ಬೆಳಗು ಮೂಡಿಸುವನು
ನೀ ಅಳುಕದಿರು ಎಂದವನು

ಇಳೆ ತಬ್ಬುವ ಕಪ್ಪಿರುಳು ಛಾಯೆಯಲಿ
ಛಲದ ಮಾತಗಳಲಿ ಎಳೆಮನ ಬಲಿಸಿದವನು
ನೋವೆಂಬುದು ಅಪ್ಪುವ ಆರ್ಭಟದಲು
ನಗುವೆ ಉತ್ತರವಾಗಿಸಿ ಛಲದ ಚೈತನ್ಯವಾದವನು

ನೋವಿನ ಹನಿಗಳು ಕರಗುವುದು 
ಬದುಕಿನ ಕನಸು ಅರಳುವುದು
ನೋವುಂಡ ಜೀವಕೆ ಗೆಲುವೆಂದು
ಶಕ್ತ ಬಾಳಿಗೆ ಮುನ್ನುಡಿ ಬರೆದವನು
ನೀನೆ ಜೀವದ ಜೀವಾತ್ಮನು

ರಾಮಚಂದ್ರ ಸಾಗರ್