Tuesday, 13 April 2021

ಯುಗಾದಿ..


ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲು ಆರೋಗ್ಯ, ನಗು, ಸಂಪತ್ತು, ಸಹಬಾಳ್ವೆಯನ್ನು ಕರುಣಿಸಲಿ..ಎಲ್ಲರ ಬಾಳು ಬೆಳಗಲಿ ಎಂದು ಆಶಿಸಿ ಯುಗಾದಿ ಕವಿತೆ ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಶುಭಾಶಯಗಳು..

ಯುಗಾದಿ..


ಕಹಿಯ ಬವಣೆ ಕರಗಲು

ಸಿಹಿಯ ಬದಕು ಅರಳಲು

ಮನ ಮನಗಳಲಿ ಯುಗಾದಿ

ಹಚ್ಚಬೇಕಿದೆ ಹೊಸ ದೀವಟಿ.. 


ಚೈತ್ರಮಾಸದ ಹೊಸದಿನ

ಕರೆತರಲಿ ಹೊಸತನ

ಎಲ್ಲರೆದೆಯ ಬೆಳಗಲು

ಉದಯಿಸಲಿ ಬಂಧುತ್ವ...


ರವಿ ಚಂದ್ರರ ಗತಿಯಲ್ಲಿ

ಬಾನು ಭುವಿಯ ಪರಿಧಿಯಲ್ಲಿ

ಬದಲಾಗುವ ಘಳಿಗೆಯಲ್ಲಿ 

ಮರೆಯಾಗಲಿ ಮತ್ಸರ

ಯುಗಾದಿ ತರಲಿ ಸಂತಸ ...


ಅರೆ ನಿಮಿಷವಾದರು 

ಅನ್ಯರ ಮನ ನೋಯಿಸದಿರು

ಕಹಿಯ ಮನಸು ದಹಿಸಿ

ಸಿಹಿಯ ಮನಸು ಅರಳಿಸಿ

ಹರುಷದ ಗೂಡಾಗು..


ವರುಷಗಳ ಆಯುಷ್ಯ 

ಕರಗದಿರಲಿ ವ್ಯರ್ಥ

ಅಂತ್ಯವಾಗುವ ಮುನ್ನ

ಗಳಿಸು ತುಸು ಸಂಪನ್ನತೆ

ಸಿಹಿಯಾದಿಯಾಗಲಿ ತನು ಮನ...


 ರಚನೆ: ರಾಮಚಂದ್ರ ಸಾಗರ್


Sunday, 11 April 2021

ಪ್ರೇಮವೇ ನೀ ಮಳೆಯಾಗು..


ಪ್ರೇಮವೇ ನೀ ಹರುಷದ ಮಳೆಯಾಗು

ತುಸುವು ಬಿಡುವು ನೀ ನೀಡದೇ ಧುಮ್ಮಿಕ್ಕುತಿರು

ನನ್ನೆದೆಯ ಹೂಬನಕೆ ನೀ ಜೀವವಾಗಲು

ಮನದ ಬಯಕೆಗೆ ನೀ ಉತ್ತರವಾಗಲು....


ಪ್ರೀತಿಯೇ ನೀ ಸಡಗರದ ಬೆಳಕಾಗು

ಕ್ಷಣ ಕ್ಷಣವು ನೀ ಜಗವೆಲ್ಲವು ಕಂಗೊಳಿಸುತಿರು

ಮನವೆಲ್ಲವು ನೀ ಒಲವಿನ ಕಾಂತಿಯಾಗಲು

ನನ್ನ ಕಣ್ಣಾಲಿಯಲಿ ನೀ ಪ್ರೀತಿ ಬೆಳಗಲು...


ಒಲವೇ ನೀ ಸತ್ಕಾರದ ತಂಗಾಳಿಯಾಗು

ಕೊಂಚವೂ ನೀ ವಿರಮಿಸದೇ ಅಲೆದಾಡುತಿರು

ಸಾಕಾರದ ಮನಕೆ ನೀ ಪ್ರೇರಣೆಯಾಗಲು

ಬದುಕೆಲ್ಲವು ನೀ ಚೇತನದ ನೆಲೆಯಾಗಲು....


ಅನುರಾಗವೇ ನೀ ಒಲವಿನ ಗೀತೆಯಾಗು

ಅನುದಿನವು ನೀ ಬಾಳಿಗೆ ಮಂಗಳವಾಗಲು

ಎದೆಯ ದನಿಗೆ ನೀ ಉಸಿರಾಗಲು

ಮಮತೆಯ ಬಾಳಿಗೆ ನೀ ಸ್ವರವಾಗಲು...


ಸೌಜನ್ಯವೇ ನೀ ಸಭ್ಯತೆಯ ಮಂದಿರವಾಗು

ಸುಜ್ಞಾನವ ನೀ ಹರಸುವ ದೈವವಾಗು

ಬೇಡಿದ ಮನಕೆ ಪ್ರೀತಿಯ ವರವಾಗಲು

ಬಾಡದ ಕುಸುಮ ನನ್ನಯ ಬಾಳಾಗಿಸಲು..


ಪ್ರೇಮವೇ ನೀ ಹರುಷದ ಮಳೆಯಾಗು

ಪ್ರೀತಿಯ ಹೂಬನಕೆ ನೀ ಆಸರೆಯಾಗಲು

ಮೋಹದ ಮನಕೆ ನೀ ಪ್ರೇರಣೆಯಾಗಲು

ಸಜ್ಜನಿಕೆಯ ಒಲವಿಗೆ ನೀ ಆರತಿಯಾಗಲು...


ರಾಮಚಂದ್ರ ಸಾಗರ್


ಸ್ನೇಹದ ಹಾದಿಯಲಿ




ಪ್ರೀತಿಯ ಕೊಳದಲಿ ಅರಳಿದ ಕುಸುಮವೇ

ಗೆಳತಿ ನಿನ್ನ ನಗುತುಂಬಿದ ಮೊಗವಲ್ಲವೇ


ಪ್ರೇಮದ ಮನದಲಿ ಒಲವಿನ ನರ್ತನವೇ

ಗೆಳತಿ ನಿನ್ನ ಸವಿ ನೆನಪುಗಳ ಕೃಪೆಯಲ್ಲವೇ


ಸ್ನೇಹದ ಹಾದಿಯಲಿ ಕೈಡಿದ ಜೀವವೇ

ಗೆಳತಿ ನಿನ್ನ ವಾತ್ಸಲ್ಯದ ಮೋಹವಲ್ಲವೇ


ಕಾನನದ ಕಂದರದಲಿ ಬೆಳಗಿದ ದೀಪವೇ

ಗೆಳತಿ ನಿನ್ನ ನಗುವಿನ ಕಿರಣವಲ್ಲವೇ


ಬಾಡಿದ ಬದುಕಿನಲಿ ಭರವಸೆಯ ಆಸರೆಯೇ

ಗೆಳತಿ ನಿನ್ನ ಮಮತೆಯ ಬಂಧನವಲ್ಲವೇ


ಕಾಡುವ ಬಯಕೆಯಲಿ ನಿತ್ಯದ ತೊಳಲಾಟವೇ

ಗೆಳತಿ ನಿನ್ನ ವಿರಹದ ಪಾಶದ ವಿಷವಲ್ಲವೇ


ಭಾವಭವದ ಉಸಿರಿನಲಿ ಬೆಸೆದ ಜೀವವೇ

ಗೆಳತಿ ನಿನ್ನ ಪಾವನ ಹೃದಯವಲ್ಲವೇ


ನೋವಿರದ ನೌಕೆಯಲಿ ಹರುಷದಾ ರಾಶಿಯೇ

ಗೆಳತಿ ನಿನ್ನ ಸಾರಥ್ಯದ ಛಲವಲ್ಲವೇ


ಒಲವಿನ ಮನೆಯಲಿ ಪ್ರೇಮಾಮೃತದ ಅಕ್ಷಯವೇ

ಗೆಳತಿ ನಿನ್ನ ಸೌಜನ್ಯದ ಕೈಸೆರೆಯಲ್ಲವೇ?


ಅನುರಾಗದ ಅಲೆಯಲಿ ಅಪ್ಪಿದ ಸುಖವೇ

ಗೆಳತಿ ನಿನ್ನ ಔದಾರ್ಯದ ಉಡುಗೊರೆಯಲ್ಲವೇ


ರಾಮಚಂದ್ರ ಸಾಗರ್


Saturday, 13 March 2021

ಸದಸ್ಯರಿಗೂ ಅಧಿಕಾರ ನೀಡಿ

 


ಎಲ್ಲರಿಗೂ ನಮಸ್ಕಾರ...

ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದೆ. ಮೊದಲು ಮೂರು ವರ್ಷಗಳಿಗೊಮ್ಮೆ ಇದ್ದ ಚುನಾವಣೆ ಈಗ 5ವರ್ಷಗಳಿಗೆ ಬದಲಾಗಿದೆ. ಈಗ ಪ್ರಸ್ತುತ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರ ಅವಧಿಯಲ್ಲೇ ಬೈಲಾ ತಿದ್ದುಪಡಿಯಾಗಿ 5ವರ್ಷಗಳ ಅವಧಿಯ ಅಧಿಕಾರವು ಸೃಜನೆಯಾಯಿತು. ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರವನ್ನು ಹಿಡಿಯುವವರು ಐದು ವರ್ಷಗಳ ಆಡಳಿತ ನಡೆಸುತ್ತಾರೆ.

ಇದು ಒಂದೆಡೆ ಆದರೆ ಪರಿಷತ್ತಿನ ಸದಸ್ಯರು ಯೋಚಿಸಬೇಕಾದವು ಹಲವು ವಿಚಾರಗಳಿವೆ. ಬೈಲಾಗೆ ಇನ್ನೂ ಹಲವು ತಿದ್ದುಪಡಿಗಳಾಗಿದ್ದರೆ ಸೊಗಸಾಗಿತ್ತು. ಕೇವಲ ಅಧಿಕಾರದ ವಿಚಾರವೊಂದೇ ಬದಲಾದರೆ ಸಾಕೆ? ಈಗ ಚುನಾವಣೆಯ ಸಮಯವಾದ್ದರಿಂದ ಹಲವು ಜನ ಅಕಾಂಕ್ಷಿಗಳು ಸದಸ್ಯರ ಮನೆಕಡೆಗೆ ಗಮನ ಹರಿಸಿದ್ದಾರೆ. ಹಲವರಿಂದ ದೂರವಾಣಿ ಕರೆಗಳು/ಪತ್ರಗಳು ಬರುತ್ತಿವೆ. ಇವೆಲ್ಲಾ ಮುಗಿದು ಮುಂದೊಂದು ದಿನ ಯಾರೋ ಅಧಿಕಾರಕ್ಕೆ ಬರುತ್ತಾರೆ ಬಿಡಿ. ಆದರೆ ಪರಿಷತ್ತಿನೊಳಗಿನ ಸಮಸ್ಯೆಗೆ ಪರಿಹಾರ ನಿಜವಾಗಿಯೂ ದೊರೆಯುತ್ತದೆಯೇ? ಈ ಸಮಯದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರುತ್ತವೆಯೇ?

ಪರಿಷತ್ತಿನ ಕಾರ್ಯಕ್ರಮಗಳನ್ನು ಕಾರ್ಯಕಾರಿ ಮಂಡಳಿಯವರೇ ನಿರ್ಧರಿಸುತ್ತಾರೆ. ಅವರೇ ಸರ್ವ ತೀರ್ಮಾನವನ್ನು ಕೈಗೊಳ್ಳುತ್ತಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯೂ ಅವರಿಂದಲೇ ಆಗುತ್ತದೆ. ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹೆಚ್ಚೆಂದರೆ ಸದಸ್ಯರು ಭಾಗವಹಿಸಬಹುದು ಅಷ್ಟೇ. ಇಷ್ಟಕ್ಕೇ ಸದಸ್ಯ ಸೀಮಿತವಾಗಬೇಕೆ? ಆತನಿಗೂ ಏನಾದರೂ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನೀಡುವುದು ಬೇಡವೇ?

ನಾಡಿನಲ್ಲಿ ಸುಮಾರು ಮೂರುವರೆ ಲಕ್ಷ ಜನ ಪರಿಷತ್ತಿನ ಸದಸ್ಯರಿದ್ದಾರೆ. ಇವರೆಲ್ಲರ ಪ್ರತಿನಿಧಿಯಾಗಿ ಆಯ್ಕೆಯಾದವರೇ ಎಲ್ಲ ಅಧಿಕಾರವನ್ನು ಚಲಾಯಿಸುತ್ತಾರೆ. ಇದೆಲ್ಲದರ ಹೊರತಾಗಿ ಕೊನೆಪಕ್ಷ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿಯಾದರೂ ಪರಿಷತ್ತಿನ ಸದಸ್ಯರನ್ನು ಪರಿಗಣಿಸಬೇಕು. ಇನ್ನು ಮುಂದೆ ಆಯ್ಕೆಯಾದವರು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ಆಯೋಜಿಸುತ್ತಾರೆ. ಇವರಾದರೂ ಸರ್ವಾಧ್ಯಕ್ಷರನ್ನು ಸದಸ್ಯರ ಅಭಿಮತವನ್ನು ಪಡೆದು ಆಯ್ಕೆಮಾಡಿದರೆ ಸಂತಸ. ಅಂದರೆ ಈಗ ಹೇಗೆ ಎಲ್ಲರ ಮನೆ ಮನೆಗೂ ಭೇಟಿ ನೀಡಿ ಮತ ಕೇಳುತ್ತಿದ್ದಾರೋ ಹಾಗೇಯೆ ಮುಂದಿನ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆಮಾಡಲು ಅಭಿಪ್ರಾಯ ಕೇಳಲು ಅವರಿಗೆ ಕಷ್ಟವಂತೂ ಅಲ್ಲ ಬಿಡಿ. ಎಲ್ಲದಕ್ಕೂ ಹಂಬಲ ಮತ್ತು ಉದ್ದೇಶ ಮುಖ್ಯ. ಈ ನಿಟ್ಟಿನಲ್ಲಿ ಈಗಲೇ ಸದಸ್ಯರೆಲ್ಲ ಒಗ್ಗಟ್ಟಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು.

 ಆಗಲಾದರೂ ಕನ್ನಡ ಹಿರಿಯ ಕಾದಂಬರಿಗಾರರಾದ ಎಸ್. ಎಲ್.ಭೈರಪ್ಪ, ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಹಾಗೂ ಜನಪರ ಸಾಹಿತಿ ಹಾಗೂ ಸಮಾಜಮುಖಿ ಚಿಂತನೆಯ ಚಿಲುಮೆ ದೇವನೂರು ಮಹಾದೇವರಂತಹ ಸಜ್ಜನರು ಹಾಗೂ ಸರಸ್ವತಿ ಪುತ್ರರನ್ನು ಸವಾಧ್ಯಕ್ಷರಾಗಿ ವೇದಿಕೆಯ ಮೇಲೆ ಕಾಣುವ ಅವಕಾಶ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಜೊತೆಗೆ ಕನ್ನಡ ನಾಡಿನ ಜನತೆಗೆ ಸಿಗಬಹುದೇನೊ.

ನಾನಂತೂ ಮನೆಗೆ ಮತ ಕೇಳಲು ಬಂದವರಿಗೆ ಹಾಗೂ ದೂರವಾಣಿ ಮೂಲಕ ಮತ ಕೇಳಿದವರಿಗೆ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಇನ್ನು ನೀವು?

ವಂದನೆಗಳೊಂದಿಗೆ..

ರಾಮಚಂದ್ರ ಸಾಗರ್