Tuesday, 26 February 2019

ಚತುರೆಯು ನೀನಲ್ಲವೇ

ತಣಿರು ತಂಗಾಳಿಯಲಿ ತಣಿಸಿದ ತಂಪಲೆಯು 
ತಾರುಣ್ಯದ ನೌಕೆಯಲಿ ರಮಿಸಿದ ತರುಣಿಯು 
ತಿಳಿ ಕಾಸಾರದಲಿ ನಗುವ ಕುಸುಮವು
ತೀರದಾ ದಾಹದುರಿಗೆ ಉತ್ತರವಾದವಳು ನೀನಲ್ಲವೇ

ತುಡಿತದ ಹೃದಯಕೆ ಬೆಸೆದ ಉಸಿರು  
ತೂಗುವ ಒಲವ ಮೇನೆಯಲಿ ಜೊತೆಯಾಗಿ ನಕ್ಕವಳು
ತೃಪ್ತ ಒಲುಮೆಯ ದೀಪವಾಗಿ ಬೆಳಗುವವಳು
ತೆರೆದಮನದ ಪಾವನೆಯು ನೀನಲ್ಲವೇ ಗೆಳತಿ

ತೇಜಸ್ಸು ಒಲವ ಮಂದಿರದಲಿ ಹರಿಸಿದವಳು
ತೈಲಚಿತ್ರದಲಿ ಪಳಿಸುವ ಚೆಲುವತನಯೆ ನೀನಲ್ಲವೇ
ತೊಟ್ಟಿಕ್ಕುವ ಪ್ರೀತಿ ಹನಿಯನು ಕಡಲಾಗಿಸಿದವಳು
ತೋರುವ ಜಗದಲಿ ಒಲವ ರಂಗು ಚೆಲ್ಲಿದವಳು ನೀನಲ್ಲವೇ

ತಂಬಿಸುವ ಮುಸ್ಸಂಜೆಯಲಿ ಕೈಹಿಡಿದ ಕಾದಲೆಯು
ತಹತಹಿಸುವ ಮನದಲಿ ನಿರಾಳತೆ ತುಂಬಿದವಳು
ತಳಿರುಗೆಂಪು ಕಿನಾರೆಯಲಿ ಹೊಂಗನಸು ಪೋಣಿಸಿದವಳು
ತಾಕತ್ತು ಸಂಪ್ರೀತಿಯಲಿ ತುಂಬಿದ ಚತುರೆಯು ನೀನಲ್ಲವೇ

ತಿರುಳನು ಬಾಳಿಗೆ ಕರುಣಿಸಿದ ಕರುಣಾಳು 
ತೀರದ ಒಲವಿನ ಅಕ್ಷಯದ ಒಡಲಾದವಳು
ತೆನೆತುಂಬಿ ಅಕ್ಕರೆಯ ಕಾಳಿನ ಹೊಡೆ ಕಟ್ಟಿದವಳು
ತೇಜಸ್ವಿನಿಯಾಗಿ ಬಾಳು ಕಂಗೊಳಿಸಿದ ಕಾಂತೆ ನೀನಲ್ಲವೇ

ರಾಮಚಂದ್ರ ಸಾಗರ್

Sunday, 24 February 2019

ಬರಬಾರದೇ ಗೆಳತಿ

ಅಮಿತ ಕಾಡುವ ಕನಸಿಗೆ ಉತ್ತರವಾಗಲು ಬರಬಾರದೇ
ಆನಂದದ ಆನನಕೆ ಮಾಲೆಯಾಗಲು ಬರಬಾರದೇ
ಇನಿದಾದ ಮೋಹದ ಮಳೆಯಾಗಲು ಬರಬಾರದೇ
ಈ ಹೃದಯದಾ ಕುಶಲತೆ ಕೇಳಲಿಂದು ಬರಬಾರದೇ

ಉಲ್ಲಾಸದ ಉತ್ಸವದಲಿ ಸಾಗಲು ಬರಬಾರದೇ
ಊಹಿಸುವ ಬಾಳಲಿ ಜೊತೆಯಾಗಲು ಬರಬಾರದೇ
ಋತದ ಪ್ರೀತಿಯಲಿ ಒಂದಾಗಲು ಬರಬಾರದೇ
ಎಳಸು ಮನದಲಿ ಬಲ ನೀಡಲು ಬರಬಾರದೇ

ಏಕಾಂತದದ ವೇಳೆಯಲಿ ಸಿಂಗಾರವಾಗಲು ಬರಬಾರದೇ
ಐಕ್ಯದಾ ಪ್ರೀತಿಯಲಿ ಬೆಳಕಾಗಲು ಬರಬಾರದೇ
ಒನಪು ನಗುವಿನಲಿ ಬಾಳ ತೇರಾಗಲು ಬರಬಾರದೇ
ಓಜಸ್ಸು ಮಮತೆಯಲಿ ಉದಿಸಲು ಬರಬಾರದೇ

ಔದಾರ್ಯದ ಸ್ನೇಹದಲಿ ಕೈಹಿಡಿಯಲು ಬರಬಾರದೇ
ಅಮೃತಪಾನ ಪ್ರೇಮದಲಿ ಉಣಿಸಲು ಬರಬಾರದೇ
ಅಹಮಿಕೆ ತ್ಯಾಗದಲಿ ತೋರೋಣ ನೀ ಬರಬಾರದೇ
ಅನಂತ ಸುಖದಲಿ ಬಾಳೋಣ ನೀ ಬರಬಾರದೇ

ಆಲಾಪದ ಸವಿಜೇನಲಿ ತಣಿಸಲು ನೀ ಬರಬಾರದೇ
ಇಂಪಾದ ಸವಿಗಾನದಲಿ ರಮಿಸಲು ನೀ ಬರಬಾರದೇ
ಈಷ್ರ್ಯೆಯ ಜಗದಲಿ ಜಯದಾತಳಾಗಲು ನೀ ಬರಬಾರದೇ
ಉನ್ಮೀಲಿತ ಮನದಲಿ ನೆಲೆಯೂರಲು ನೀ ಬರಬಾರದೇ

ನೋವಿನ ಶರಧಿಯಿಂದ ಮೇಲೆತ್ತಲು
ವಿರಹದ ವಿಷಕೆ ಕೊನೆ ಹೇಳಲು
ನೀ ಬರಬಾರದೇ ನೀ ಕೈಹಿಡಿಯಬಾರದೇ
ರಾಮಚಂದ್ರ ಸಾಗರ್

Friday, 22 February 2019

ಕಾಯುತಿರುವೆ ನಿನಗಾಗಿ

ಮೋಹದ ಶರಧಿಯ ಸಮ್ಮೋದದಲೆಯಾಗಿ ಬೀಸಿದವನೇ
ಮೋಹಿಸುವ ಬದುಕಿನ ಪ್ರೇರಣೆಯಾಗಿ ಬೆಳಗಿದವನೇ
ಸತ್ಕಾರದ ಸವಿಮಾತನು ಎದೆಯಲಿ ಉಸಿರಾಗಿಸಿದವನೇ
ಸಡಗರದ ನದಿಯ ಜೀವಜಲವಾಗಿ ಹರಿದವನೇ
ಕಾದಿರುವೆ ನಿನಗಾಗಿ ನಿನ್ನೊಲವ ಸುಜಲಧಾರೆಗಾಗಿ

ಹೃದಯ ಸೌಂದರ್ಯ ಮೈದೊಳೆದು ರಮಿಸಿದವನೇ
ಹೃದಯಂಗಮದ ನೀತಿಗೆ ಉತ್ತರವಾಗಿ ಸಿಕ್ಕವನೇ
ಹೃದಯ ಕಮಲದಲಿ ನೆಲೆಯಾದ ಚೆಲುವನೇ
ಹೃಸ್ವ ಸ್ವರದಲಿ ಒಲವಮೇಳ ಅಲೆಯಾಗಿಸಿದವನೇ
ರಚ್ಚೆ ಹಿಡಿದಿರುವೆ ನಿನಗಾಗಿ ನಿನ್ನೊಲವ ಸ್ವರಧಾರೆಗಾಗಿ

ಕೀಟಲೆಯ ಕನಸುಗಳಲಿ ಕಚಗುಳಿಯಿಟ್ಟವವೇ
ಕಿಶೋರದ ಒಲವಿನಲಿ ಬಲತನ ತಂದವನೇ
ಕಿನಾರೆಯ ಹೂಬನಲಿ ನೈದಿಲೆಯಾಗಿ ನಕ್ಕವನೇ
ಕಿಚ್ಚಿಸುವ ಮನದಲಿ ಸಮ್ಮೋಹದ ತಣಿವಾದವನೇ 
ಕಳವಳಿಸುತಿರುವೆ ನಿನಗಾಗಿ ನಿನ್ನೊಲವ ಕೈಸೆರೆಗಾಗಿ

ವಯ್ಯಾರದ ಸರೋವರದಲಿ ಪ್ರೇಮ ನೌಕೆಯಾದವನೇ
ವಸುಧಾತಳ ಶಿರದಲಿ ಸುಳಿದಾಡುವ ತಂಗಾಳಿಯಾದವನೇ
ವಸುಮತಿಯ ಎದೆಯ ಬೆಳಗುವ ರವಿಸುತನೇ
ವನಸುಮದ ಸೌರಭದ ಸೌಗಂಧವಾಗಿ ಅಪ್ಪಿದವನೇ
ಬಯಸುತಿರುವೆ ನಿನಗಾಗಿ ನಿನ್ನೊಲವ ಸೌರಭದಲೆಗಾಗಿ

ಇನನ ತೇರಿನಲಿ ನವ್ಯತೆಯ ಬೆಳಕಾಗಿ ಬಂದವನೇ
ಇನಿದಾದ ಕನಸಿನಲಿ ಶುಭವಾಣಿ ನುಡಿದವನೇ
ಇರಾದೆಯ ಪ್ರೀತಿಯನು ರುಜುವಾತು ಪಡಿಸಿದವನೇ
ಇಚ್ಛಿಸುವ ಬಾಳನು ಕಾಯುವ ಯೋಧನೇ
ಕಾಯುತಿರುವೆ ನಿನಗಾಗಿ ನಿನ್ನೊಲವ ರಕ್ಷೆಗಾಗಿ

ರಾಮಚಂದ್ರ ಸಾಗರ್

Tuesday, 12 February 2019

ನೀ ನಗುವ ಮೊಗವು

ದನಿಸುವ ಎದೆಯಗಾನದ ಉಸಿರೇ 
ನಿನ್ನೊಲವ ಉಡುಗೊರೆಯು
ಹನಿಸುವ ಸವಿಕನಸುಗಳ ಜನನವೇ 
ನೀ ನಗುವ ಮೊಗವು

ಭರವಸೆಯ ಬಾಂಧವ್ಯದ ಓರಣವೇ 
ನೀ ಬರುವ ಬಾಳು
ಬಂಗಾರದ ಬದುಕಿನ ಬಯಕೆಯೇ 
ನೀ ಮಾಡಿದ ಮೋಡಿಯು

ಚತುರ ಮಾತಿನ ಮೆಲುಸವಿಯೇ 
ನೀ ನುಡಿವ ಪಿಸುಮಾತು
ಮನೋಹರ ಮಹಲಿನ ಆನಂದವೇ 
ನೀನಿರುವ ಕುಟೀರವು

ಇನಿದಾದ ಘಳಿಗೆಯ ಸಿಹಿಯೇ 
ನೀ ನೋಡುವ ನೋಟವು
ಉಲ್ಲಾಸದ ಉಪಸಾನೆಯ ಒಲವೇ
ನೀ ಉದಿಸಿದ ಉನ್ಮಾದವು

ಬೆಳುದಿಂಗಳು ಬೊಂಬೆಯ ಕುರುಹೇ
ನೀ ಎನ್ನುವ ಮಾಯೆಯು
ರಮ್ಯತೆ ಚೆಲ್ಲುವ ಸಾಧನವೇ
ನಾ ಬಯಸುವಾ ನಿನ್ನೊಲವು

ರಾಮಚಂದ್ರ ಸಾಗರ್