Friday, 29 December 2017

ನಿನ್ನ ಪ್ರೀತಿಯಾ ಮೋಹ

ಗೆಳತೀ..
ನೀ ನಡೆವಾಗ ಕುಣಿವ ನಿನ್ನ ಹೂತುಂಬಿದ ಜಡೆಯು
ನನ್ನ ಕೈಬೀಸಿ ಕರೆದಂತೆ ಪ್ರೀತಿಗೆ ಆಹ್ವಾನ ನುಡಿದಂತೆ
ನಿನ್ನ ಮೋಹದ ಸೆರೆಯಲಿ ಹೃದಯ ನಲಿದಂತೆ
ನಿನ್ನ ಒಯ್ಯಾರದ ನಡಿಗೆಯ ಮನ ಬೆಂಬತ್ತಿ ನಡೆದಂತೆ
ಗೆಳತೀ..ಏನೀ ನಿನ್ನ ಹೂತುಂಬಿದ ಜಡೆಯ ಮೋಹ

ಗೆಳತೀ..
ನೀ ಬಳಕುವಾಗ ತೂಗುವ ನಿನ್ನ ಸಿಂಗಾರ ಕಿವಿಯೋಲೆಯು
ನನ್ನ ಬಾಳಿಗೆ ಪ್ರೇಮದ ಉಯ್ಯಾಲೆಯಾದಂತೆ
ಪ್ರೇಮದ ಉಯ್ಯಾಲೆಯಲಿ ನೀ ಶುಭ ನುಡಿಯ ಪಿಸುಗಿದಂತೆ
ಶುಭ ನುಡಿಯ ಮೋಹದಲೆಯು ಬಾಳಿಗೆ ಸಡಗರವಾದಂತೆ
ಗೆಳತೀ..ಏನೀ ನಿನ್ನ ಕಿವಿಯೋಲೆಯ ಸಿಂಗಾರ

ಗೆಳತೀ..
ನೀ ನಲಿವಾಗ ಗುನುಗುವ ನಿನ್ನ ಕಾಲ್ಗೆಜ್ಜೆಯ ನಾದವು
ನನ್ನ ಅನುರಾಗದ ಪದಗಳಿಗೆ ಸ್ವರಮೇಳವಾದಂತೆ
ಬಾಳಿಗೆ ನಿನ್ನಿಂದಲೆ ಪ್ರೇಮದ ಕಾವ್ಯ ಕರುಣೆಯಾದಂತೆ
ಅನುಪಮ ಒಲವಗಾನ ಬಾಳಿಗೆ ಸತ್ಕಾರವಾದಂತೆ
ಗೆಳತೀ..ಏನೀ ನಿನ್ನ ಕಾಲ್ಗೆಜ್ಜೆಯ ಒಯ್ಯಾರ

ಗೆಳತೀ..
ನೀ ನಗುವಾಗ ಮೂಡುವ ಅನುಪಮ ಸೊಬಗು
ನನ್ನ ಪ್ರೀತಿಯ ಕನಸಿಗೆ ಒಲವ ಕಣಜವಾದಂತೆ
ನಿನ್ನ ಸೊಗಸು ನಗುವಿನಲಿ ಮನ ಬಂಧಿಯಾದಂತೆ
ಅನುಪಮ ಸೊಗಸು ಬಾಳಲಿ ನೆಲೆಯಾದಂತೆ
ಗೆಳತೀ..ಏನೀ ನಿನ್ನ ನಗುಮೊಗದ ಸೋಜಿಗ

ಗೆಳತೀ..
ನೀ ಕೈಹಿಡಿದಾಗ ಮೊಳಗಿದ ಕೈಬಳೆಗಳ ಸದ್ದು
ನಮ್ಮ ಬಾಳಿಗೆ ಅಭಯದಾ ವಚನ ನುಡಿದಂತೆ
ನಿನ್ನ ಅರವಿಂದದ ತಿಲಕ ಪ್ರೀತಿಗೆ ಸಂಕೇತವಾದಂತೆ
ಬಾಳಲಿ ಒಲವಿನಾ ಕುರುಹು ಕಂಡಂತೆ
ಗೆಳತೀ..ಏನೀ ನಿನ್ನ ಪ್ರೀತಿಯಾ ಮೋಹ

          ರಾಮಚಂದ್ರ ಸಾಗರ್

Thursday, 28 December 2017

ಕ್ಷಣ ಕ್ಷಣವೂ

ಬಾಳಿನ ಹಾದಿಯಲಿ ನಗುಧಾರೆಯ ಬೊಂಬೆಯಾಗಿ 
ಬಿನ್ನಾಣದ ನಗುವಿನಲಿ ಹೂಮಳೆಯಾ ಸಿರಿಯಾಗಿ
ಬಿಚ್ಚು ಮಾತಿನಲಿ ಪ್ರೀತಿಗೆ ತೇರಾಗುತಾ
ಬಾಳ ನೌಕೆಗೆ ಒಲವ ಸಾರಥಿ ನೀನಾಗುತಾ
ಕೈ ಹಿಡಿದು ಸಾಗುತಿರಲು ಕ್ಷಣ ಕ್ಷಣವೂ ಸಂಭ್ರಮವೂ

ಮೌನ ಭಾಷೆಯ ಪ್ರೇಮ ಸಲ್ಲಾಪದ ಮಧುವು
ಮೌಲಿಕ ಮನದ ಪ್ರೀತಿಯ ಮಂಟಪವು
ಮಧುರ ಪಯಣದ ಒಲವ ಇಂಧನವು
ಮನೋಜ್ಞ ಪಥದ ಸಿಂಗಾರದ ಚಿಲುಮೆಯು
ಜೊತೆಯಾಗಿರಲು ಕ್ಷಣ ಕ್ಷಣವೂ ಮಧುವೂ

ಬೀಗುವ ಮನದ ಒಲವ ತೇಜಸ್ವಿಯು
ಸೌಜನ್ಯದ ಬಾಳಿಗೆ ಸಂಪನ್ನ ಆಸರೆಯು
ಸಂದೇಹದ ಮುಳ್ಳಿಗೆ ಸಂಕೋಲೆ ತೊಡಿಸಿದವಳು
ಒಡಕುದನಿ ಮೂಡದಂತೆ ಮನ ಬೆಸೆದವಳು
ಜೊತೆಯಲಿರಲು ಕ್ಷಣ ಕ್ಷಣವೂ ಸಿರಿಗಂಧವೂ

ಒಲವ ಸೌರಭದಲಿ ಬಾಳಿಗೆ ರಂಗೇರಿಸಿದವಳು
ಹೃದಯ ಸೌಂದರ್ಯದಲಿ ಮನ ಬಂಧಿಸಿದವಳು
ಸೌಹಾರ್ದ ಮನದಲಿ ಬಾಳಿಗೆ ಸಿಂಗಾರವಾದವಳು
ಸೌಮ್ಯದ ನಗುವಿನಲಿ ಬಾಳ ನೌಕೆ ಎಳೆವವಳು
ನವಿರಾಗಿ ನಗುತಿರಲು ಕ್ಷಣ ಕ್ಷಣವೂ ಪ್ರೀತಿಯ ಅಭಿಷೇಕವೂ

              ರಾಮಚಂದ್ರ ಸಾಗರ್

Tuesday, 5 December 2017

ಸಿಹಿಯಾಮೃತ ನೀನಾದೆ..

ನಗುವ ನಯನಗಳಲಿ ನೀನಿಳಿದೆ
ಗೆಳತಿ ಮನದ ಮನೆಯೊಳಗೆ
ಮುಸ್ಸಂಜೆ ರಂಗಲಿ ಪ್ರೀತಿಯಲೆಯಲಿ
ಬಾಳಿಗೆ ಕರೆವವಳು ನೀನಾದೆ..

ಪ್ರೀತಿ ಕುಸುಮ ನೀನರಳಿಸಿದೆ
ಗೆಳತಿ ಪ್ರೇಮ ನಾವೆಯೊಳಗೆ
ಒಲವ ಸೌಗಂಧ ಲೇಪಿಸಿದೆ
ಗೆಳತಿ ನಿನ್ನ ಅನುರಾಗದ ಛಲದೊಳಗೆ

ಒಲವ ಮೆರವಣಿಗೆ ಹೊರಡಿಸಿದೆ
ಗೆಳತಿ ನಿನ್ನೊಲವು ತುಂಬಿದ ಜಗದೊಳಗೆ
ನವಿರು ಸ್ಪರ್ಷದಲಿ ಶೃಂಗಾರಕೆ
ಗೆಳತಿ ಮಧುರ ಕನಸು ಕಣಜ ನೀನಾದೆ

ಚೆಲುವ ಕುಸುಮಗಳ ಜಗದೊಳಗೆ
ಗೆಳತಿ ಮೇಳೈಸುವ ಬೆಡಗಿ ನೀನಾದೆ
ತಣಿಸುವ ತಂಗಾಳಿಯಲಿ ಪ್ರೀತಿಯಲೆ
ಕರೆತರುವ ವಯ್ಯಾರಿಯು ನೀನಾದೆ

ಮೆತ್ತನೆ ಮರೆಯಾಗುವ ರವಿಗು
ತುಸು ನಿಧಾನಿಸಲು ಕಾರಣವು ನೀನಾದೆ
ಬಾಳ ಪಥದೊಳಗೆ ಒಲವ ಕುಸುಮ
ಬಾಡದೇ ಉಳಿಸುವ ಬೆಡಗಿ ನೀನಾದೆ..
ಬಾಳಿಗೆ ಒಲಿದ ಸಿಹಿಯಾಮೃತ ನೀನಾದೆ..

            ರಾಮಚಂದ್ರ ಸಾಗರ್

Wednesday, 11 October 2017

ಬವಣೆಯ ಶರಧಿ ನೀ ಕರಗಿಸು

ಗೆಳೆಯಾ ನೀನಿರದ ಅರಮನೆಯಲ್ಲಿ 
ಬೆಳಗುವ ದೀಪಗಳಲಿ ಬೆಳಕೆಂಬುದು ಭ್ರಮೆಯು
ಗೆಳೆಯಾ ನೀನಿರದ ನನ್ನ ಮನದಲ್ಲಿ
ಬದುಕುವ ಛಲದಲಿ ಹಂಬಲವೂ ಕಾಣದು
ನಲಿವ ಬದುಕೆಂಬುದು ಮರೀಚಿಕೆಯು

ಗೆಳೆಯಾ ನೀ ಕಾಣದೇ ಇರಲು
ಜಗದ ಮೂಲೆ ಮೂಲೆಯು ಭಯದ ಗೂಡು
ಸಾಗುವ ಪಥದಲಿ ನಲಿವೆಂಬುದು ನಶ್ವರವು
ಸಾಗುವ ಬನದ ಹಾದಿಯು ಬೆಂಕಿಯಾ ಪಥವೂ
ಭಯದಾ ಬದುಕಲ್ಲಿ ಬಾಳು ಉಳಿವುದೇನು ?

ನಿನ್ನ ಭರವಸೆಯ ಹಾಡಿರದೇ ಈ ಬಾಳಲಿ
ನಾ ಹೇಗೆ ನಗುತ ನಲಿಯಲಿ ಜಗದಲಿ
ನಿನ್ನ ಅಭಯದಾ ಪದಗಳ ಕೊರತೆಯಲಿ
ನಾ ಹೇಗೆ ರೋಧಿಸುವ ಹೃದಯವಾ ಸಂತೈಸಲಿ
ನೊಂದ ಮನದ ಬೇಗೆಯ ನಿನಗೇಗೆ ಹೇಳಲಿ 

ನಿನ್ನ ಜೊತೆಯ ಭಾಗ್ಯವಿರದ ಈ ಬಾಳಲಿ
ನಗುವೆಂಬುದು ನನಗೆ ಕ್ಷಯವಾಗುವ ಕ್ಷಣವು
ನಿನ್ನ ಚಪ್ಪಾಳೆಯ ಸದ್ದಿರದ ಈ ಜಗದಲಿ
ನಾ ಹೇಗೆ ಹೆಜ್ಜೆ ಹಾಕಲಿ ಕಾಲ್ಗೆಜ್ಜೆಗೆ ಕೆಲಸವೆಲ್ಲಿ ?
ನಲಿವ ಮನದಾಸೆಗಿನ್ನೂ ನೋವೆಣಿಸುವ ಕೆಲಸವು

ಗೆಳೆಯಾ ನೀನಿರದೇ ತಂಪಿರುಳು
ಉರಿವ ಮರಳುಗಾಡು
ಗೆಳೆಯಾ ನೀನಿರದೇ ಈ ಬಾಳು
ನೋವ ಶರಧಿಯಲಿ ಮುಳುಗುವಾ ನೌಕೆಯು

ಮೆಲು ನಗುವ ಮೊಗದಲ್ಲಿ ನೀ ಅಗಮಿಸು
ಬದುಕು ಬೆಳಗುವಾ ದೀಪವಾಗು
ನೋವ ಶರಧಿಯ ನೀ ಕರಗಿಸು
ಹೊಂಗನಸು ಚೆಲ್ಲುವಾ ಮನದರಸನಾಗು..

ರಾಮಚಂದ್ರ ಸಾಗರ್